ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಚಾಲನಾ ಪರವಾನಗಿ ಪತ್ರದ ಹಂಚಿಕೆ ಬಹಳ ಸುಲಭವಾಗಿ ನಡೆಯುತ್ತಿದೆ. ಈವರೆಗೂ ಶೇಕಡ 80 ರಷ್ಟು ಪ್ರಮಾಣದಲ್ಲಿ ಚಾಲನಾ ಪರವಾನಗಿ ಪತ್ರಗಳನ್ನು ಅಂಚೆ ಮೂಲಕವೇ ಕಳಿಸಿಕೊಡಲಾಗಿದೆ. ಕೇವಲ ಶೇಕಡ 2ರಷ್ಟು ಪ್ರಮಾಣದಷ್ಟು ಅಂಚೆ ಪತ್ರಗಳು ವಾಪಸ್ ಬಂದಿರುವುದು ಬಿಟ್ಟರೆ ಬೇರೇನೂ ಸಮಸ್ಯೆ ಎದುರಾಗಿಲ್ಲ.
ಗಣಿಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ಸದಾ ಜನಜಂಗುಳಿ ಕೂಡಿಕೊಂಡಿರುತ್ತಿತ್ತು. ಆದರೆ, ಕೋವಿಡ್ ಸೋಂಕು ಹರಡುವಿಕೆ ಹಿನ್ನೆಲೆ ಲಾಕ್ಡೌನ್ ಘೋಷಣೆಯಾಯ್ತು. ಬಳಿಕ ಹಂತಹಂತವಾಗಿ ಅನ್ ಲಾಕ್ ಆಗಿ ನಿಯಮಗಳು ಕೊಂಚ ಸಡಿಲಿಕೆಯಾದರೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಮಾತ್ರ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಮತ್ತು ಕಡ್ಡಾಯ ಮಾಸ್ಕ್ ಧರಿಸುವುದನ್ನು ಪಾಲಿಸುತ್ತಿದೆ. ಕಳೆದ 3-4 ತಿಂಗಳಿನಿಂದಲೂ ಕಚೇರಿಯಲ್ಲಿ ಚಾಲನಾ ಪರವಾನಗಿ ಪತ್ರ ಪಡೆಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ತಗ್ಗಿದೆ.
ಎಆರ್ಟಿಓ ಶ್ರೀನಿವಾಸ ಗಿರಿ ಪ್ರತಿಕ್ರಿಯೆ ಅಲ್ಲದೇ ಲಘು ಮತ್ತು ಭಾರಿ ಹಾಗೂ ದ್ವಿಚಕ್ರ ವಾಹನ ಖರೀದಿದಾರರ ಸಂಖ್ಯೆ ಕಮ್ಮಿಯಾದ ಹಿನ್ನೆಲೆ, ಚಾಲನಾ ಪರವಾನಗಿ ಪತ್ರದ ಡಿಮ್ಯಾಂಡ್ ಕೂಡ ಕಮ್ಮಿಯಾಗಿದೆ. ಲಾಕ್ ಡೌನ್ ಮತ್ತು ಅನ್ ಲಾಕ್ ಜಾರಿಗೊಳ್ಳುವ ಮುನ್ನ ಪ್ರತಿದಿನ ನೂರಾರು ಚಾಲನಾ ಪರವಾನಗಿ ಪತ್ರಗಳುಳ್ಳ ಆನ್ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿತ್ತು. ಆದರೀಗ ಕೇವಲ ಹತ್ತಾರು ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತಿದೆ.
ಇದನ್ನೂ ಓದಿ:ಉನ್ನತ ಶಿಕ್ಷಣ ಪಡೆಯುವುದರಲ್ಲಿ ಯುವತಿಯರೇ ಮುಂದು
ಇನ್ನೂ ಲಾಕ್ಡೌನ್ಗೂ ಮುನ್ನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಜಾಸ್ತಿಯಾಗಿತ್ತು. ಹಿಂದಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ ಮಲ್ನಾಡ್ ಅವರು ವಿಶೇಷ ಮುತುವರ್ಜಿಯಿಂದ ಆನ್ ಲೈನ್ ಅರ್ಜಿಗಳ ಸ್ವೀಕೃತಿಯಿಂದಾಗಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲಾಯಿತು. ಇದೀಗ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ, ನೇರವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಬಂದರೆ ಸಾಕು. ಅತ್ಯಂತ ಸರಾಗವಾಗಿ ಚಾಲನಾ ಪರವಾನಗಿ ಪತ್ರಗಳನ್ನು ಪಡೆಯಬಹುದು. ಕಡಿಮೆ ಶುಲ್ಕದಲ್ಲೇ ಈ ಚಾಲನಾ ಪರವಾನಗಿ ಪತ್ರ ಪಡೆಯಲು ಈಗ ಸಕಾಲ ಬಂದೊದಗಿದೆ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎಆರ್ಟಿಓ) ಶ್ರೀನಿವಾಸ ಗಿರಿ, 2019ರ ಡಿಸೆಂಬರ್ ತಿಂಗಳಿನಿಂದ 2020r ಸೆಪ್ಟೆಂಬರ್ 30 ರವರೆಗೆ ಸರಿ ಸುಮಾರು 14,000 ಕ್ಕೂ ಅಧಿಕ ಚಾಲನಾ ಪರವಾನಗಿ ಪತ್ರಗಳನ್ನು ವಿತರಿಸಲಾಗಿದೆ. ನಮ್ಮ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲ. ಆನ್ ಲೈನ್ ಅರ್ಜಿ ಹಾಕೋದನ್ನು ಜಾರಿಗೆ ತಂದ ಬಳಿಕ ಮಧ್ಯವರ್ತಿಗಳೆಲ್ಲರೂ ನಾಪತ್ತೆಯಾಗಿದ್ದಾರೆ. ಆನ್ ಲೈನ್ ನಲ್ಲಿ ಚಾಲನಾ ಪರವಾನಗಿ ಪತ್ರದ ಅರ್ಜಿಯನ್ನ ಸಲ್ಲಿಸಿದ್ರೆ ಸಾಕು. ವಾರದಲ್ಲೇ ಅವರ ಮನೆ ಬಾಗಿಲಿಗೆ ಬಂದು ಚಾಲನಾ ಪರವಾನಗಿ ಪತ್ರದ ಸ್ಮಾರ್ಟ್ ಕಾರ್ಡ್ ಅನ್ನು ವಿತರಿಸಲಾಗುತ್ತದೆ. ನಮ್ಮಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವೇ ಇಲ್ಲ ಎಂದ್ರು ಎಆರ್ಟಿಓ ಶ್ರೀನಿವಾಸ ಗಿರಿ.
ವಾಸ್ತವವೇ ಬೇರೆ? ಆನ್ ಲೈನ್ ನಲ್ಲಿ ಅರ್ಜಿ ಸ್ವೀಕೃತಿಯಾದ್ರೂ ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿ ಮಾತ್ರ ಭ್ರಷ್ಟಾಚಾರ ನಡೆಸದೇ ಚಾಲನಾ ಪರವಾನಗಿ ಪತ್ರವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸದಿರೋದನ್ನು ನಾನಂತೂ ನೋಡಿಯೇ ಇಲ್ಲ ಎಂದು ಚಾಲನಾ ಪರವಾನಗಿ ಪತ್ರಕ್ಕೆ ಅರ್ಜಿ ಸಲ್ಲಿಸಿದವರು ದೂರಿದ್ದಾರೆ.