ಬಳ್ಳಾರಿ:ಕಳೆದ ರಾತ್ರಿ ಬಳ್ಳಾರಿ ಹೊರವಲಯದ ಗುಗ್ಗರಹಟ್ಟಿಯ ಕೃಷ್ಣಾ ಕಾಲೋನಿಯಲ್ಲಿ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೆಆರ್ಪಿಪಿ ಕಾರ್ಯಕರ್ತನಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೆಹಬೂಬ್ ಬಾಷಾರನ್ನ ಕಾಂಗ್ರೆಸ್ ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಘಟನೆ ಸದನದಲ್ಲೂ ಚರ್ಚೆಗೆ ಕಾರಣವಾಗಿದೆ.
ಬಳ್ಳಾರಿ ನಿವಾಸಿ ಮೆಹಬೂಬ್ ಬಾಷಾ ಅವರು ಗಾಲಿ ಜನಾರ್ದನ ರೆಡ್ಡಿಯವರ ನೂತನ ಕೆಆರ್ಪಿಪಿ ಪಕ್ಷದ ಕಾರ್ಯಕರ್ತರಾಗಿದ್ದರು. ಮೆಹಬೂಬ್ ಬಾಷಾ ಮಗನ ಹುಟ್ಟುಹಬ್ಬದ ಹಿನ್ನೆಲೆ ಕೇಕ್ ತೆಗೆದುಕೊಂಡು ಮನೆಗೆ ಬಂದಿದ್ದರು. ಈ ವೇಳೆ ಬೈಕ್ನಲ್ಲಿ ಆಗಮಿಸಿದ್ದ ಮೂವರು ದುಷ್ಕರ್ಮಿಗಳು ಮೆಹಬೂಬ್ ಬಾಷಾರನ್ನು ಹೊರಗೆ ಕರೆದಿದ್ದಾರೆ. ಬಳಿಕ ತಾವು ತಂದಿದ್ದ ಚಾಕು ಮತ್ತು ಮಚ್ಚುಗಳಿಂದ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದರು.
ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಮೆಹಬೂಬ್ ಬಾಷಾರನ್ನ ಸಂಬಂಧಿಕರು ಮತ್ತು ಸ್ಥಳೀಯರು ತಕ್ಷಣ ವಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದರು. ಆದ್ರೂ ಚಿಕಿತ್ಸೆ ಫಲಕಾರಿಯಾಗದೇ ಮೆಹಬೂಬ್ ಬಾಷಾ ಸಾವನ್ನಪ್ಪಿದ್ದರು. ಮೃತ ಮೆಹಬೂಬ್ ಬಾಷಾ ಅವರು ಕಳೆದ ಚುನಾವಣೆಯಲ್ಲಿ ಕೆಆರ್ಪಿಪಿ ಅಭ್ಯರ್ಥಿ ಲಕ್ಷ್ಮೀ ಅರುಣಾ ಪರವಾಗಿ ಪ್ರಚಾರ ಮಾಡಿದ್ದರು.
ಮೆಹಬೂಬ್ ಬಾಷಾರನ್ನ ಕಾಂಗ್ರೆಸ್ ಕಾರ್ಯಕರ್ತರಾದ ಕಾಂಗ್ರೆಸ್ ಮುಖಂಡ ಕೋಳಿ ಅನ್ವರ್, ಅಲ್ತಾಪ್, ಸಿರಾಜ್ ಸೇರಿ ಹತ್ಯೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆರೋಪಿಗಳ ವಿಚಾರಣೆ ವೇಳೆ ಮೆಹಬೂಬ್ ಬಾಷಾರನ್ನ ಕಾಂಗ್ರೆಸ್ ಕಾರ್ಯಕರ್ತರಾದ ಕೋಳಿ ಅನ್ವರ್, ಅಲ್ತಾಪ್, ಸಿರಾಜ್ ಸೇರಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಸದನದಲ್ಲಿ ಧ್ವನಿಯೆತ್ತಿದ ಜನಾರ್ದನ ರೆಡ್ಡಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತ ಮೆಹಬೂಬ್ ಬಾಷಾ ಹತ್ಯೆ ಬಗ್ಗೆ ಇಂದು ವಿಧಾನ ಸಭೆ ಕಲಾಪದಲ್ಲಿ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ಪ್ರಸ್ತಾಪಿಸಿದ್ದರು. ಅಧಿವೇಶನದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖಂಡರು ಈ ಹತ್ಯೆಯನ್ನು ಖಂಡಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತ ಮೆಹಬೂಬ್ ಬಾಷಾ ಅವರು ರಿಯೆಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದರು. ಇವರನ್ನು ಹತ್ಯೆ ಮಾಡಿರುವವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಂದು ತಿಳಿದು ಬಂದಿದೆ. ಮೆಹಬೂಬ್ ಬಾಷಾ ಅವರು ತಮ್ಮ ಐದು ವರ್ಷದ ಪುತ್ರನ ಜನ್ಮದಿನಾಚರಣೆಯ ಸಂಭ್ರಮದಲ್ಲಿದ್ದಾಗ ಕಾಂಗ್ರೆಸ್ ಕಾರ್ಯಕರ್ತರು ಅವರ ಮನೆಗೆ ಬಂದು, ಬಾಷಾರನ್ನು ಹೊರಗಡೆ ಕರೆದಿದ್ದಾರೆ. ಹೊರಗಡೆ ಬಂದ ಭಾಷಾ ಅವರಿಗೆ 12 ಬಾರಿ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಜನಾರ್ದನ ರೆಡ್ಡಿ ಹೇಳಿದರು.
ಈ ಕೊಲೆಯ ಬಗ್ಗೆ ರಾಜಕೀಯ ಮಾಡುವ ಉದ್ಧೇಶ ನನ್ನದಲ್ಲ. ಆದರೇ ಬಳ್ಳಾರಿಯಲ್ಲಿ ಈ ಕೊಲೆಯಿಂದ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಕೊಲೆಯ ಕುರಿತು ಬಳ್ಳಾರಿ ಎಸ್ಪಿಯೊಂದಿಗೆ ನಾನು ಮಾತನಾಡಿದ್ದೆ ಎಂದು ಹೇಳಿದ ಶಾಸಕ ಜನಾರ್ದನರೆಡ್ಡಿ, ಬುಧವಾರ ರಾತ್ರಿ 1-30 ರ ಸುಮಾರಿಗೆ ಕೊಲೆಯ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಶಾಸಕ ಜನಾರ್ದನ ರೆಡ್ಡಿ ಆಗ್ರಹಿಸಿದ್ದಾರೆ.
ಪ್ರಾಥಮಿಕ ವಿಚಾರಣೆ ವೇಳೆ ಹತ್ಯೆ ಹಿಂದೆ ರಾಜಕೀಯ ಪ್ರೇರಣೆ ಇಲ್ಲ ಅನ್ನೋದು ಪೊಲೀಸರಿಗೆ ಗೊತ್ತಾಗಿದೆ. ಮೆಹಬೂಬ್ ಬಾಷಾ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಚೆನ್ನಾಗಿ ಬೆಳೆಯುತ್ತಿದ್ದರು. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಕೋಳಿ ಅನ್ವರ್ಗೆ ಮೆಹಬೂಬ್ ಬಾಷಾ ಸ್ಪರ್ಧೆ ನೀಡುತ್ತಿದ್ದ. ಇದನ್ನ ಸಹಿಸದ ಅನ್ವರ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಮೆಹಬೂಬ್ ಬಾಷಾ ರನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದ. ಅದೇ ರೀತಿ ಬಾಷಾರನ್ನು ಕೊಲೆ ಮಾಡಿದ್ದಾರೆ ಎಂದು ಎಸ್ಪಿ ರಂಜೀತ್ ಕುಮಾರ್ ಬಂಡಾರು ತಿಳಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಬಳ್ಳಾರಿ ಗ್ರಾಮೀಣ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಕೋರ್ಟ್ಗೆ ಹಾಜರು ಪಡಿಸಿರುವ ಪೊಲೀಸರು ಹೆಚ್ಚಿನ ತನಿಖೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪೊಲೀಸರ ಸಮಗ್ರ ತನಿಖೆ ಬಳಿಕ ಈ ಹತ್ಯೆಯ ನಿಖರ ಕಾರಣ ತಿಳಿಯಲಿದೆ. ಈ ಘಟನೆ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಅನುಸರಿಸಿದ್ದಾರೆ.
ಓದಿ:ಹೊಸ ಯುವಕನೊಂದಿಗೆ ಚಿಗುರಿದ ಪ್ರೀತಿ.. ಹಳೆ ಪ್ರಿಯಕರನಿಗೆ ನಾಗರಹಾವಿನಿಂದ ಕಚ್ಚಿಸಿದ ಪ್ರೇಯಸಿ!