ಬಳ್ಳಾರಿ:ಸಾರ್ವಜನಿಕರು ತಮ್ಮ ವಾಹನಗಳನ್ನು ಆರು ತಿಂಗಳಿಗೊಮ್ಮೆ ಪರೀಕ್ಷೆ ಮಾಡಿಸಿ ಸುಸ್ಥಿರವಾಗಿ ಇಟ್ಟುಕೊಳ್ಳಬೇಕು. ಜೊತೆಗೆ ವಾಹನಗಳನ್ನು ಕಡ್ಡಾಯವಾಗಿ ವಾಯುಮಾಲಿನ್ಯ ತಪಾಸಣೆಗೆ ಒಳಪಡಿಸಿ ಪರಿಸರ ಸ್ನೇಹಿಯಾಗಿ ವರ್ತಿಸಬೇಕು ಎಂದು ಬಳ್ಳಾರಿ ಜಿಲ್ಲೆಯ ಆರ್ಟಿಓ ಅಧಿಕಾರಿ ಎನ್. ಶೇಖರ್ ತಿಳಿಸಿದರು.
ಸಾರ್ವಜನಿಕರು ವಾಹನಗಳಿಗೆ ವಾಯುಮಾಲಿನ್ಯ ತಪಾಸಣೆ ಮಾಡಿಸಿ, ಪರಿಸರ ಸ್ನೇಹಿಯಾಗಿರಿ ನಗರದ ಆರ್ಟಿಓ ಕಚೇರಿಯ ಆವರಣದಲ್ಲಿ ಇಂದು ವಾಯುಮಾಲಿನ್ಯ ನಿಯಂತ್ರಣ ಮಾಸ ನವೆಂಬರ್ 2020 ರ ಕಾರ್ಯಕ್ರಮಕ್ಕೆ ಬಳ್ಳಾರಿಯ ಆರ್ಟಿಓ ಅಧಿಕಾರಿ ಶೇಖರ್ ಅವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಈ ಸಮಯದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಸಹ ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಮತ್ತು ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಈ ಜಾಗೃತಿ ಕಾರ್ಯಕ್ರಮ ನಡೆಯುತ್ತದೆ ಎಂದು ತಿಳಿಸಿದರು.
ಇತ್ತೀಚಿನ ಬಿಹೆಚ್ 6 ವಾಹನಗಳಲ್ಲಿ ಮತ್ತು ಸಿ.ಎನ್.ಸಿ ಗ್ಯಾಸ್ ಅಳವಡಿಸಿದ ಕಾರುಗಳಲ್ಲಿ .3 (ಪಾಯಿಂಟ್ ಮೂರು) ಕಾರ್ಬನ್ ಮೋನಾಕ್ಸೈಡ್ ಇದೆ. ತಂತ್ರಜ್ಞಾನದಿಂದ ಬಹಳ ಬದಲಾವಣೆಯಾಗುತ್ತಿದೆ. ಬಿಹೆಚ್ 6 ವಾಹನಗಳು ಬಂದಿರುವುದರಿಂದಾಗಿ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ ಎಂದರು.
ವಾಹನ ಮಾಲೀಕರಾದ ಸಾರ್ವಜನಿಕರು ತಮ್ಮ ವಾಹನಗಳನ್ನು ಆರು ತಿಂಗಳಿಗೊಮ್ಮೆ ವಾಯು ಮಾಲಿನ್ಯ ತಪಾಸಣೆ ಮಾಡಿಸಿಕೊಂಡು ಪರಿಸರ ಸ್ನೇಹಿಯಾಗಿರಬೇಕು ಎಂದು ಮನವಿ ಮಾಡಿದರು.
ವಾಯುಮಾಲಿನ್ಯದಿಂದ ಏನೆಲ್ಲಾ ಪರಿಣಾಮಗಳುಂಟಾಗುತ್ತವೆ ಎಂದು ತಿಳಿಸಿದ ಇನ್ಸಪೆಕ್ಟರ್ ಪಿ. ವೆಂಕಟರಮಣ ರೆಡ್ಡಿ ಅವರು, ಎಲ್.ಪಿ.ಜಿ ಮತ್ತು ಒ.ಎನ್.ಜಿ.ಸಿ ನೈಸರ್ಗಿಕ ಗ್ಯಾಸ್ ನ್ನು ಇತ್ತೀಚಿನ ದಿನಗಳಲ್ಲಿ ವಾಹನ ಸವಾರರು ಬಳಸಿಕೊಂಡರೆ ವಾಯು ಮಾಲಿನ್ಯ ಕಡಿಮೆಯಾಗುತ್ತದೆ ಎನ್ನುವ ಉದ್ದೇಶದಿಂದ ಒ.ಎನ್.ಜಿ.ಸಿ ನೈಸರ್ಗಿಕ ಅನಿಲ ಬಳಸಿಕೊಂಡು ವಾಹನಗಳನ್ನು ಓಡಿಸುವ ಸಂಶೋಧನೆಗೂ ಮುಂದಾಗುತ್ತಿದ್ದಾರೆ. ದೆಹಲಿಯಲ್ಲಿ ಒ.ಎನ್.ಜಿ.ಸಿ ಅನಿಲವನ್ನು ಲಾರಿಗಳಿಗೆ ಬಳಸಿದ್ದಾರೆ. ಅದರಿಂದ ವಾಯು ಮಾಲಿನ್ಯ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಮುಂದುವರೆದು ಡಿಸೇಲ್, ಪೆಟ್ರೋಲ್, ಅನಿಲ ಹೊರತು ಪಡಿಸಿ ಎಲೆಕ್ಟ್ರಿಕ್ ಕಾರು, ಬಸ್ಗಳನ್ನು ಸಹ ಬಳಕೆ ಮಾಡಿಕೊಳ್ಳಬೇಕು ಎನ್ನುವ ಮುಂದಾಲೋಚನೆಗಳಿಂದ ಸರ್ಕಾರದಿಂದ ಸಂಶೋಧನಾ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ಈ ಸಮಯದಲ್ಲಿ ವಾಯು ಮಾಲಿನ್ಯ ನಿಯಂತ್ರಣ ಅಧಿಕಾರಿ ಸೋಮಶೇಖರ್, ಅಧಿಕ್ಷಕ ಮಂಜುನಾಥ ಗುಡಿ, ವಿರೇಶ್, ಸಹಾಯಕ ಪ್ರಾದೇಶಿಕ ಅಧಿಕಾರಿ ಬಿ.ಎಸ್. ಶ್ರೀನಿವಾಸಗಿರಿ ಹಾಗೂ ಆರ್ಟಿಓ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು.