ಬಳ್ಳಾರಿ:ಗಣಿಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ಸಮರ್ಪಕ ನಿರ್ವಹಣೆ ಕೊರತೆ ಸಮಸ್ಯೆ ಬೆಳಕಿಗೆ ಬಂದರೆ ಅಂತಹ ಏಜೆನ್ಸಿಗಳನ್ನು ಮುಲಾಜಿಲ್ಲದೆ ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಒ ಎಚ್ಚರಿಕೆ ರವಾನಿಸಿದ್ದಾರೆ.
ಶುದ್ಧ ನೀರಿನ ಘಟಕಗಳ ನಿರ್ವಹಣೆಯಲ್ಲಿ ಕೊರತೆಯಾದರೆ ಏಜೆನ್ಸಿಗಳು ಬ್ಲ್ಯಾಕ್ ಲಿಸ್ಟ್ಗೆ: ಸಿಇಒ
ಗಣಿಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ಸಮರ್ಪಕ ನಿರ್ವಹಣೆ ಕೊರತೆ ಸಮಸ್ಯೆ ಬೆಳಕಿಗೆ ಬಂದರೆ ಅಂತಹ ಏಜೆನ್ಸಿಗಳು ಮುಲಾಜಿಲ್ಲದೆ ಕಪ್ಪು ಪಟ್ಟಿಗೆ ಸೇರಲಿವೆಯಂತೆ. ಹೀಗಂತ ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಒ ಎಚ್ಚರಿಕೆ ನೀಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಎಂಜಿನಿಯರ್ ಇಲಾಖೆಯಿಂದ ಜಿಲ್ಲೆಯ ನಾನಾ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸಮರ್ಪಕವಾಗಿರಬೇಕು. ಅವುಗಳ ನಿರ್ವಹಣೆ ಕೊರತೆ ಕಂಡುಬಂದರೆ ಸಂಬಂಧಿಸಿದ ಏಜೆನ್ಸಿಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಲಾಜಿಲ್ಲದೆ ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಲಿದ್ದಾರೆ.
ಈ ಸಂಬಂಧ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಸಿಇಒ ಕೆ. ಆರ್. ನಂದಿನಿ ಅವರು, ಜಿಲ್ಲೆಯಲ್ಲಿ ಸರಿ ಸುಮಾರು 1200ಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಆ ಪೈಕಿ 1088 ಘಟಕಗಳು ಸುಸ್ಥಿಯಲ್ಲಿವೆ. 46 ಘಟಕಗಳು ದುರಸ್ತಿಯಲ್ಲಿವೆ. ಇನ್ನೂ 67 ಘಟಕಗಳನ್ನು ಹೊಸದಾಗಿ ಸ್ಥಾಪಿಸಬೇಕಿದೆ. ವರ್ಷದಿಂದ ವರ್ಷಕ್ಕೆ ಈ ಘಟಕಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗುತ್ತವೆ. ಆದರೆ, ಈವರೆಗೂ ಯಾವುದೇ ಏಜೆನ್ಸಿಗಳು ಕಪ್ಪು ಪಟ್ಟಿಗೆ ಸೇರಿಲ್ಲ. ಸಹಕಾರ ಸಂಘಗಳ ಅಧೀನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 12 ಘಟಕಗಳ ನಿರ್ವಹಣೆ ಕೊರತೆ ಎದುರಾಗಿತ್ತು. ಅವುಗಳನ್ನು ಬೇರೆ ಏಜೆನ್ಸಿಯ ಸುಪರ್ದಿಗೆ ನೀಡಲಾಗಿದ್ದು, ಸದ್ಯ ಅವುಗಳ ನಿರ್ವಹಣೆ ಸಮರ್ಪಕವಾಗಿಯೇ ಇದೆ ಎನ್ನಲಾಗ್ತಿದೆ.