ಬಳ್ಳಾರಿ:ನಗರದ ಆರ್ಟಿಒ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, 33 ಖಾಸಗಿ ಏಜೆಂಟ್ಗಳಿಂದ ಲಕ್ಷಾಂತರ ರೂ. ನಗದು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಬಳ್ಳಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ಆರ್ಟಿಒ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಖಾಸಗಿ ಏಜೆಂಟರುಗಳ ತನಿಖೆ ನಡೆಸಿದರು. ಕಚೇರಿಯಲ್ಲಿ ವಾಹನಗಳ ನೋಂದಣಿ, ಚಾಲನಾ ಪರವಾನಗಿ, ನಿರ್ವಾಹಕ ಲೈಸನ್ಸ್, ವಾಹನಗಳ ಪರ್ಮಿಟ್ ಇನ್ನಿತರ ಸರ್ಕಾರಿ ಕೆಲಸಗಳಿಗಾಗಿ ಅಧಿಕಾರಿಗಳು, ಸಿಬ್ಬಂದಿ, ಏಜೆಂಟ್ಗಳು ಲಂಚ ಪಡೆಯುತ್ತಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದೆ.
ದಾಳಿ ವೇಳೆ 33 ಖಾಸಗಿ ಏಜೆಂಟ್ಗಳಿಂದ 3,94,000 ರೂ. ವಶಪಡಿಸಿಕೊಳ್ಳಲಾಗಿದೆ. ಶೋಧನಾ ಕಾಲಕ್ಕೆ ದಾಖಲಾತಿಗಳ ಅನ್ವಯ ವಹಿವಾಟು ನಡೆಸಿದ ಮೊತ್ತ 3,41,000 ರೂ. ಇದನ್ನು ಸ್ವೀಕೃತಿ ಪಡೆದು ಸಾರಿಗೆ ಅಧಿಕಾರಿಗಳಿಗೆ ಹಣ ಹಿಂತಿರುಗಿಸಲಾಗಿದೆ. ಸೋಮವಾರ ಬ್ಯಾಂಕ್ಗೆ ಜಮಾ ಮಾಡಬೇಕಾದ ಹಗರಿ ಚೆಕ್ ಪೋಸ್ಟ್ನಲ್ಲಿ ಸಂಗ್ರಹವಾದ ಮೊತ್ತ 1,96,000 ರೂಪಾಯಿ ಆಗಿದೆ. ಇದನ್ನು ಸಹ ಸ್ವೀಕೃತಿ ಪಡೆದು ಸಾರಿಗೆ ಅಧಿಕಾರಿಗಳಿಗೆ ಹಣ ಹಿಂತಿರುಗಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಸಂಜೆ 7 ಗಂಟೆವರೆಗೆ ಎಸಿಬಿ ತಂಡ ತನಿಖೆ ನಡೆಸಿದೆ.
ಖಾಸಗಿ ಏಜೆಂಟ್ಗಳಾದ ಪ್ರಕಾಶ್, ಖಾದರ್, ಅಬ್ದುಲ್, ಪಾಲಾಕ್ಷಿ ಸುರೇಶ್ ಎಂಬುವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗುತ್ತದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು.
ಭ್ರಷ್ಟಾಚಾರ ನಿಗ್ರಹ ದಳ ಬಳ್ಳಾರಿ ಡಿವೈಎಸ್ಪಿ ಚಂದ್ರಕಾಂತ್ ಪೂಜಾರ್, ಕೊಪ್ಪಳ ಜಿಲ್ಲೆ ಡಿವೈಎಸ್ಪಿ ರುದ್ರ ಪೂಜಿನ ಕೊಪ್ಪ, ಬಳ್ಳಾರಿ ಇನ್ಸ್ಪೆಕ್ಟರ್ ಶ್ರೀಧರ್ ದೊಡ್ಡಿ, ಕೊಪ್ಪಳ ಇನ್ಸ್ಪೆಕ್ಟರ್ ಬಿಳಿಮಗಿ ತಂಡದಿಂದ ದಾಳಿ ನಡೆದಿದೆ.