ಹೊಸಪೇಟೆ(ವಿಜಯನಗರ): ಆರೋಗ್ಯ ಸಿಬ್ಬಂದಿ ಇಂಜೆಕ್ಷನ್ ನೀಡಿದ ಅರ್ಧಗಂಟೆಯಲ್ಲೇ ಮಹಿಳೆ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಜರುಗಿದೆ.
ಶಾಂತಮ್ಮ (55) ಸಾವನ್ನಪ್ಪಿದ ಮಹಿಳೆ. ಶಾಂತಮ್ಮ ಮೈಕೈ ನೋವು, ಜ್ವರ ಎಂದು ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ವೈದ್ಯರು ಪರೀಕ್ಷೆ ಮಾಡಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿ ಶಾಂತಮ್ಮಗೆ ಇಂಜೆಕ್ಷನ್ ನೀಡಿದ್ದಾರೆ. ಇದಾದ ಬಳಿಕ ಅರ್ಧಗಂಟೆಯಲ್ಲಿಯೇ ಅವರು ನಾಲಿಗೆ ಕಚ್ಚಿಕೊಂಡು ಮೃತಪಟ್ಟಿದ್ದಾರೆ. ಆರೋಗ್ಯ ಸಿಬ್ಬಂದಿಯ ಯಡವಟ್ಟಿನಿಂದ ಮಹಿಳೆ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.