ವಿಜಯನಗರ: ಹೊಸಪೇಟೆ ನಗರದ ರಾಣಿಪೇಟೆಯಲ್ಲಿ ಕಲುಷಿತ ನೀರು ಸೇವಿಸಿ ಒಬ್ಬರು ಮಂಗಳವಾರ ಸಂಜೆ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ರಾಣಿಪೇಟೆಯ 12ನೇ ಕ್ರಾಸ್ ನಿವಾಸಿ ಲಕ್ಷ್ಮೀದೇವಿ (50) ಮೃತ ಮಹಿಳೆ. 11 ತಿಂಗಳ ಮಗು ಹಾಗೂ 40ಕ್ಕೂ ಹೆಚ್ಚು ಜನರು ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಲಕ್ಷ್ಮೀದೇವಿ ಅವರು ಮಂಗಳವಾರ ಎಂಟರಿಂದ ಹತ್ತು ಸಲ ವಾಂತಿ ಬೇದಿ ಮಾಡಿಕೊಂಡಿದ್ದರು. ಆರೋಗ್ಯ ಕಾರ್ಯಕರ್ತೆಯರು ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದ್ದರು. ಆದರೆ, ಅವರು ಆರ್‌ಎಂಪಿ ವೈದ್ಯರ ಬಳಿ ಚಿಕಿತ್ಸೆ ಪಡೆದು, ಮನೆಯಲ್ಲೇ ಗ್ಲುಕೋಸ್ ಹಾಕಿಸಿಕೊಂಡಿದ್ದರು. ಸಂಜೆ ವೇಳೆಗೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ನಗರದಲ್ಲಿ ಪೈಪ್ಲೈನ್ ಕಾಮಗಾರಿ ನಡೆಯುವ ವೇಳೆ ನೀರು ಕಲುಷಿತಗೊಂಡಿರುವ ಅನುಮಾನ ವ್ಯಕ್ತವಾಗಿದೆ.
ಈ ಬಗ್ಗೆ ನಗರಸಭೆ ಸದಸ್ಯ ರೂಪೇಶ್ ಎಂಬುವರು ಪ್ರತಿಕ್ರಿಯಿಸಿ, ಕಳೆದ ನಾಲ್ಕು ದಿನದಿಂದ ಈ ಸಮಸ್ಯೆ ಶುರವಾಗಿದ್ದು, ಮೊದಲನೇ ದಿನ 7 ಜನರಿಗೆ ವಾಂತಿ ಬೇದಿ ಆಗಿತ್ತು, ಬಳಿಕ ಅದು ಹೆಚ್ಚಿತು. ನೀರು ಕಲುಷಿತಗೊಂಡಿದೆ ಎಂದು ಜನರು ಹೇಳಿದ ತಕ್ಷಣ ತಾಲೂಕು ಆರೋಗ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಸದ್ಯ ನಗರಸಭೆಯಿಂದ ನೀರು ಸರಬರಾಜು ಬಂದ್ ಮಾಡಲಾಗಿದೆ. ಅಲ್ಲದೇ ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ನಲ್ಲಿ ನೀರು ಕುಡಿಯದಂತೆ ತಿಳಿಸಿ, ಕುದಿಸಿದ ನೀರು ಮತ್ತು ಶುದ್ಧ ನೀರು ಸೇವನೆ ಮಾಡುವಂತೆ ತಿಳಿಸುತ್ತಿದ್ದಾರೆ ಎಂದು ಹೇಳಿದರು.
ಬೆಳಗಾವಿಯಲ್ಲೂ ನಡೆದಿತ್ತು ಘಟನೆ.. ಇನ್ನು, ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ವೃದ್ಧರೊಬ್ಬರು ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಅಲ್ಲದೇ ಕಲುಷಿತ ನೀರು ಸೇವನೆಯಿಂದ ಒಟ್ಟು 94 ಜನರು ಅಸ್ವಸ್ಥಗೊಂಡಿದ್ದರು. ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿತ್ತು.