ಕರ್ನಾಟಕ

karnataka

ETV Bharat / state

ವಿಜಯನಗರ : ಶಂಕಿತ ಡೆಂಗ್ಯೂಗೆ ಶಾಲಾ ಬಾಲಕಿ ಬಲಿ

ವಿಜಯನಗರದಲ್ಲಿ 7ನೇ ತರಗತಿ ವಿದ್ಯಾರ್ಥಿನಿಯೋರ್ವಳು ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾಳೆ.

By ETV Bharat Karnataka Team

Published : Sep 20, 2023, 7:14 PM IST

a-school-girl-died-of-suspected-dengue-in-vijayanagara
ವಿಜಯನಗರ : ಶಂಕಿತ ಡೆಂಗ್ಯೂಗೆ ಶಾಲಾ ಬಾಲಕಿ ಬಲಿ

ವಿಜಯನಗರ :ಶಾಲಾ ಬಾಲಕಿಯೋರ್ವಳು ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾಗಿರುವ ಘಟನೆ ವಿಜಯನಗರದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಇಲ್ಲಿನ ಹೊಸಪೇಟೆ ವಿಜ್ಞಾನ ಇ ಟೆಕ್ನೋ ಶಾಲೆಯ 7 ನೇ ತರಗತಿ ವಿದ್ಯಾರ್ಥಿನಿ ಜಾಹ್ನವಿ(13) ಎಂದು ಗುರುತಿಸಲಾಗಿದೆ.

ಮೃತ ಜಾಹ್ನವಿಯ ತಂದೆ ತಿರುಮಲೇಶ್​ ನಗರದ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್​ ಆಗಿ ಕೆಲಸ ಮಾಡುತ್ತಿದ್ದಾರೆ. ನಗರದ ಟಿ.ಬಿ. ಡ್ಯಾಂನ ವಂಕಾಯಿ ಕ್ಯಾಂಪ್‌ನಲ್ಲಿ ಇವರು ವಾಸವಾಗಿದ್ದರು. ಕಳೆದ ಒಂದು ವಾರದಿಂದ ಬಾಲಕಿಗೆ ಜ್ವರ ಕಾಣಿಸಿಕೊಂಡಿದೆ. ವೈರಲ್ ಫೀವರ್ ಎಂದು ಹೊಸಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಿದ್ದಾರೆ. ಬಳಿಕ ಜ್ವರ ಕಡಿಮೆಯಾಗದ ಹಿನ್ನೆಲೆ ಮಕ್ಕಳ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಾಲಕಿಯನ್ನು ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಂಗಳವಾರ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಕಳೆದ ಸೆ.12ರಂದು ಬಾಲಕಿಯು ಶಾಲೆಗೆ ಹೋಗಿದ್ದಳು. ಬಳಿಕ ಶಾಲೆಗೆ ಹೋಗಿರಲಿಲ್ಲ. ಅದಕ್ಕೂ ಮುನ್ನ ಬಾಲಕಿಗೆ ಜ್ವರ ಬಂದಿರಬಹುದು. ಶಂಕಿತ ಡೆಂಗ್ಯೂಗೆ ಬಲಿಯಾಗಿರುವುದು ತಿಳಿದುಬಂದಿದ್ದು, ಈ ಸಂಬಂಧ ಇಲ್ಲಿನ ಪ್ರದೇಶದಲ್ಲಿ ಆರೋಗ್ಯ ಇಲಾಖೆಯಿಂದ ಪರಿಶೀಲನೆ ನಡೆಸಲಾಗಿದೆ. ದಾವಣಗೆರೆಯಿಂದ ಮೃತ ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಹೆಚ್ಚಿನ ಕ್ರಮಕೈಗೊಳ್ಳುತ್ತೇವೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಾಲಕಿ ಜಾಹ್ನವಿ ಮೃತಪಟ್ಟ ಹಿನ್ನೆಲೆ ವಿಜ್ಞಾನ ಇ ಟೆಕ್ನೋ ಶಾಲೆಗೆ ರಜೆ ಘೋಷಣೆ ಮಾಡಲಾಗಿತ್ತು.

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ :ಕಳೆದ ವಾರ ರಾಜ್ಯಾದ್ಯಂತ ಸುಮಾರು 7 ಸಾವಿರಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದವು. ಈ ಸಂಬಂಧ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದರಲ್ಲಿ 4 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ಕಂಡುಬಂದಿತ್ತು. ಡೆಂಗ್ಯೂ ಕ್ಷಿಪ್ರವಾಗಿ ಹರಡುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಜೌಷಧ ಸಿಂಪಡಣೆ, ನೀರು ಶೇಖರಣೆಯಾಗುವ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸುವುದು ಸೇರಿದಂತೆ ಸೊಳ್ಳೆ ನಿಯಂತ್ರಣಕ್ಕೆ ಪರಿಣಾಮಕಾರಿ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ. ಮನೆ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಿ. ಸೊಳ್ಳೆ ಕಡಿತದ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. ಡೆಂಗ್ಯೂ ಬಗ್ಗೆ ಭಯ ಬೇಡ. ಜಾಗ್ರತೆಯಿರಲಿ ಎಂದು ಸಾರ್ವಜನಿಕರಿಗೆ ಸಿಎಂ ಸಲಹೆ ನೀಡಿದ್ದರು.

ಇದನ್ನೂ ಓದಿ :Dengue fever : ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ .. ಭಯ ಬೇಡ, ಜಾಗ್ರತೆಯಿರಲಿ ಎಂದ ಸಿಎಂ ಸಿದ್ದರಾಮಯ್ಯ

ABOUT THE AUTHOR

...view details