ಬಳ್ಳಾರಿ: ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆಯ ತುರ್ತು ನಿಗಾ ಘಟಕದಿಂದ ಮತ್ತೊಂದು ಘಟಕಕ್ಕೆ ರೋಗಿಯನ್ನು ಸಾಗಿಸಲು ವ್ಹೀಲ್ ಚೇರ್ ನೀಡದ ಕಾರಣ ರೋಗಿಯ ತಂದೆ ತನ್ನ ಮಗಳನ್ನ ಹೆಗಲ ಮೇಲೆ ಹೊತ್ತೊಯ್ದ ಹೃದಯ ವಿದ್ರಾವಕ ಘಟನೆ ನಡೆದಿದೆ.
ವಿಮ್ಸ್ನಲ್ಲಿ ವ್ಹೀಲ್ ಚೇರ್ ನೀಡದ್ದಕ್ಕೆ ಮಗಳನ್ನ ಹೆಗಲ ಮೇಲೆ ಹೊತ್ತೊಯ್ದ ವ್ಯಕ್ತಿ- ವಿಡಿಯೋ
ವಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಿಂದ ಮತ್ತೊಂದು ಘಟಕಕ್ಕೆ ರೋಗಿಯನ್ನು ಸಾಗಿಸಲು ವ್ಹೀಲ್ ಚೇರ್ ನೀಡದ ಕಾರಣ ರೋಗಿಯ ತಂದೆ ತನ್ನ ಮಗಳನ್ನ ಹೆಗಲ ಮೇಲೆ ಹೊತ್ತೊಯ್ದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಹರಿದಾಡುತ್ತಿದೆ.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ಮಾಬಾಷಾ ಎಂಬುವರು ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾಗಿದ್ದ ತನ್ನ ಮಗಳು ಶ್ರೀಂಥಾಜ್ ಅವರಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಆ್ಯಂಬುಲೆನ್ಸ್ ವಾಹನದಲ್ಲಿ ಇಂದು ವಿಮ್ಸ್ ಆಸ್ಪತ್ರೆಗೆ ಕರೆತಂದಿದ್ದರು. ಆ ವಾಹನವು ತುರ್ತು ನಿಗಾಘಟಕದ ಮುಂದೆ ಇಳಿಸಿ ಮುಂದೆ ಹೋಗಿದೆ. ತಮ್ಮ ಮಗಳ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆ ನೀಡುವ ಘಟಕ ಇದಲ್ಲ. ನೀವು ಬೇರೊಂದು ಘಟಕಕ್ಕೆ ತೆರಳಿ ಎಂದು ಅಲ್ಲಿನ ಸಿಬ್ಬಂದಿ ಸೂಚಿಸಿದ್ದರು. ಮಗಳಿಗೆ ಏನಾದ್ರೂ ಅವಘಡ ಸಂಭವಿಸುತ್ತೆ ಎಂಬ ಭಯದಿಂದ ಆಕೆಯ ತಂದೆಯು ವ್ಹೀಲ್ ಚೇರ್ ನೀಡುವಂತೆ ಕೋರಿದ್ದ. ಇದು ನಮ್ಮ ಘಟಕದ್ದು. ನೀವು ಹೋಗುವ ಘಟಕಕ್ಕೆ ಮಾಹಿತಿ ತಿಳಿಸಿ ವ್ಹೀಲ್ ಚೇರ್ ತರುವಂತೆ ತಿಳಿಸಿ ಬಾ ಎಂದು ಅಲ್ಲಿನ ಸಿಬ್ಬಂದಿ ರೋಗಿಯ ತಂದೆಗೆ ತಾಕೀತು ಮಾಡಿದ್ದರು ಎನ್ನಲಾಗ್ತಿದೆ.
ಅದಕ್ಕೆ ಗಾಬರಿಗೊಂಡ ಆ ವ್ಯಕ್ತಿ ಆ ವಾರ್ಡು ಇರುವಲ್ಲಿಗೆ ತಾನೇ ಹೆಗಲ ಮೇಲೆ ಅಸ್ವಸ್ಥ ಮಗಳನ್ನು ಹೊತ್ತುಕೊಂಡು ಹೋಗಿದ್ದಾನೆ. ಈ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಹರಿದಾಡುತ್ತಿದೆ.