ಬಳ್ಳಾರಿ: ಕಳೆದ ತಿಂಗಳು ವಿಪರೀತವಾಗಿ ಸುರಿದ ಮಳೆಯಿಂದಾಗಿ ತಾಲೂಕಿನಾದ್ಯಂತ ಮಳೆಯಾಶ್ರಿತ ಭೂಮಿ ಹಚ್ಚ- ಹಸಿರಿನಿಂದ ಕಂಗೊಳಿಸುತ್ತಿದೆ.
ತಾಲೂಕಿನ ಬಿ.ಬೆಳಗಲ್ಲು, ಬೆಳಗಲ್ಲು ತಾಂಡಾ, ಹರಗಿನಡೋಣಿ, ಜಾನೆಕುಂಟೆ, ಜಾನೆಕುಂಟೆ ತಾಂಡಾ ಸೇರಿದಂತೆ ಇನ್ನಿತರ ನಾನಾ ಗ್ರಾಮಗಳ ಸುತ್ತಲೂ ಸ್ಪಾಂಜ್ ಐರನ್ ಕಂಪನಿಗಳಿದ್ದು, ಅವುಗಳು ಹೊರಸೂಸುವ ಗಣಿಧೂಳಿನಿಂದಾಗಿ ಪ್ರತಿ ಬಾರಿ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿ ಹೋಗುತ್ತಿದ್ದವು. ಆದರೀಗ, ಆಯಾ ಗ್ರಾಮಗಳ ಹೊಲಗಳಲ್ಲಿ ಬೆಳೆದ ಬೆಳೆಯು ಹಚ್ಚ - ಹಸಿರಿನಿಂದ ಕೂಡಿದೆ. ಅದಕ್ಕೆ ಪ್ರಮುಖ ಕಾರಣ ಕಳೆದ ತಿಂಗಳು ಸುರಿದ ವಿಪರೀತ ಮಳೆ.
ದರೂರು ಪುರುಷೋತ್ತಮಗೌಡ ಮಾತನಾಡಿದರು ಮಳೆಯಾಶ್ರಿತ ಭೂಮಿಗಳಲ್ಲಿನ ಬೆಳೆಗಳು ಉತ್ತಮ ಫಸಲಿನತ್ತ ದಾಪುಗಾಲಿಟ್ಟಿದ್ದು, ಮಹಾಮಳೆಯಿಂದಾಗಿ ಅಂತರ್ಜಲ ಮಟ್ಟ ಕೂಡ ಚೇತರಿಕೆ ಕಂಡಿದೆ. ಬೋರ್ವೆಲ್ ಕೊರೆಸಿದ್ರೆ ಸಾಕು. ಅಂತರ್ಜಲ ಕಾರಂಜಿಯಂತೆ ಚಿಮ್ಮುತ್ತಿದೆ ಎನ್ನುತ್ತಾರೆ ಇಲ್ಲಿನ ರೈತರು.
ಈ ಬಾರಿ ಉತ್ತಮ ಮಳೆಯಾಗಿದೆ. ಪ್ರತಿಬಾರಿ ನಮ್ಮ ಹೊಲಗಳಲ್ಲಿ ಬೆಳೆದಿದ್ದ ಸಜ್ಜೆ, ಮೆಕ್ಕೆಜೋಳ, ಚೆಂಡು ಹೂ, ಶೇಂಗಾ ಸೇರಿದಂತೆ ಇನ್ನಿತರ ಬೆಳೆಗಳು ಈ ಸ್ಪಾಂಜ್ ಐರನ್ ಕಂಪನಿಗಳು ಹೊರಸೂಸುವ ಗಣಿ ಧೂಳಿನಿಂದ ಕಂಗೆಟ್ಟು ಹೋಗುತ್ತಿದ್ದವು. ಅಷ್ಟಕ್ಕೂ ಸಕಾಲದಲ್ಲಿ ಮಳೆಯಾಗದ ಕಾರಣ ಬೆಳೆಗಳು ಮೊಳಕೆ ಚಿಗುರೊಡೆಯುವ ಹಂತದಲ್ಲೇ ಒಣಗಿ ಹೋಗುತ್ತಿದ್ದವು. ಆದರೆ, ಈ ಬಾರಿ ಮಾತ್ರ ಅದ್ಯಾವ ಸಮಸ್ಯೆಯನ್ನು ಅನುಭವಿಸಿಲ್ಲ. ಉತ್ತಮ ಬೆಳೆಗಳ ಫಸಲು ಬರುವ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂಬುದು ಇಲ್ಲಿನ ರೈತರ ಮಾತು.
ಪ್ರತಿ ಬಾರಿಯೂ ಆರ್ಥಿಕ ನಷ್ಟ ಅನುಭವಿಸುತ್ತಿರುವ ನಮಗೀಗ ಆ ಭಗವಂತನೇ ಕೈಹಿಡಿದಿದ್ದಾನೆ. ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ಬೆಳೆ ನಮ್ಮ ಕೈಗೆಟು ಕುವ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಸ್ಥಳೀಯರು.