ಹೊಸಪೇಟೆ(ವಿಜಯನಗರ): ವಿಶ್ವವಿಖ್ಯಾತ ಹಂಪಿ ಎಂದಾಕ್ಷಣ ಎಲ್ಲರಿಗೂ ನೆನಪಿಗೆ ಬರೋದು ಸ್ಮಾರಕಗಳ ಸೌಂದರ್ಯ. ಆದರೆ, ಇದರೊಂದಿಗೆ ಐತಿಹಾಸಕವಾದ 500 ವರ್ಷಗಳ ಹಿಂದಿನ ಮಾವಿನತೋಪು ಸಹ ಇಲ್ಲಿದೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ.
ವಿರೂಪಾಕ್ಷೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಈ ಮಾವಿನತೋಪು ಇದೆ. ತುಂಗಭದ್ರಾ ನದಿಗೆ ಹೊಂದಿಕೊಂಡಂತೆ ಹಳೆಯ ಮಾವಿನ ಮರಗಳಿವೆ. ಒಂದೊಂದು ಮರಗಳು ಬೃಹತ್ ಆಕಾರದಲ್ಲಿವೆ. ನೂರು ಅಡಿಕ್ಕಿಂತ ಹೆಚ್ಚು ಈ ಮರಗಳು ಬೆಳೆದು ನಿಂತಿವೆ. 500 ವರ್ಷಗಳ ಹಿಂದಿನ ಮರಗಳು ಈಗಲೂ ಇವೆ ಎಂಬುದೇ ಆಶ್ಚರ್ಯಕರ ಸಂಗತಿ.
ಪೂಜಾ ಕೈಂಕರ್ಯಗಳಿಗೆ ಮಾವಿನ ತೋಪು:
500 ವರ್ಷಗಳ ಹಿಂದೆ ಒಂದು ಕಾಲು ಎಕರೆಯಲ್ಲಿ ಮಾವಿನ ಸಸಿಗಳನ್ನು ನೆಡಲಾಗಿತ್ತು. ದಸರಾ, ದೀಪಾವಳಿ, ಶಿವರಾತ್ರಿ, ಹಂಪಿಯ ಜಾತ್ರೆ ಸಂದರ್ಭದಲ್ಲಿ ಮಾವಿನ ಎಲೆಗಳನ್ನು ತೋರಣ ಕಟ್ಟಲು ಬಳಸಲಾಗುತ್ತಿತ್ತು. ಸಾಮ್ರಾಜ್ಯದ ದ್ವಾರ ಬಾಗಿಲುಗಳಿಗೆ ತೋರಣ ಕಟ್ಟಲು ಆನೆಗಳ ಮೂಲಕ ಮಾವಿನ ಸೊಪ್ಪನ್ನು ಹೊತ್ತುಕೊಂಡು ಹೋಗಲಾಗುತ್ತಿತ್ತು ಎಂಬ ಪ್ರತೀತಿ ಇದೆ.
21 ಮಾವಿನ ಮರಗಳು:
ಈ ಹಿಂದೆ ಮಾವಿನತೋಪಿನಲ್ಲಿ 21 ಮರಗಳನ್ನು ಕಾಣಬಹುದಿತ್ತು. ಕಾಲಾನುಕ್ರಮ ಪ್ರವಾಹ, ಗೆದ್ದಲು ಹಿಡಿಯುವಂತದ್ದು, ರಕ್ಷಣೆ ಮತ್ತು ಪೂರಕ ಪೋಷಣೆ ಇಲ್ಲದಿರುವುದರಿಂದ ಅನೇಕ ಮರಗಳು ನಶಿಸಿ ಹೋಗಿವೆ. ಸದ್ಯ ಈ ಮಾವಿನ ತೋಪಿನಲ್ಲಿ 7 ಮರಗಳನ್ನು ಮಾತ್ರ ಕಾಣಬಹುದಾಗಿದೆ. ಹಾಗಾಗಿ ಮುಂದಿನ ಪೀಳಿಗೆಗಾಗಿ ಈ ಮರಗಳನ್ನು ಸಂರಕ್ಷಣೆ ಮಾಡಬೇಕಾಗಿದೆ ಎಂದು ಇಲ್ಲಿನ ಪುರೋಹಿತರು.