ಹೊಸಪೇಟೆ/ಬಳ್ಳಾರಿ:75 ಸ್ವಾತಂತ್ರ್ಯ ದಿನೋತ್ಸವದ ನಿಮಿತ್ತ ಗಣಿನಗರಿ ಬಳ್ಳಾರಿಯ ಮೋತಿ ವೃತ್ತದ ಬಳಿ ಇಂದು 150 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ಬಾನೆತ್ತರದಲ್ಲಿ ಹಾರಿಸಲಾಯಿತು.
ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಧ್ವಜಾರೋಹಣ ನೆರವೇರಿಸಿದರು. ಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲದೇ ಸ್ವಾತಂತ್ರ್ಯ ದಿನವನ್ನ ಆಚರಿಸಲಾಯಿತು.
ಬಳ್ಳಾರಿ-ಹೊಸಪೇಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ಎಂಎಲ್ಸಿ ಕೆ.ಸಿ.ಕೊಂಡಯ್ಯ, ಬುಡಾ ಅಧ್ಯಕ್ಷ ದಮ್ಮೂರು ಶೇಖರ, ಎಡಿಸಿ ಮಂಜುನಾಥ, ಹಿರಿಯ ಮುಖಂಡರಾದ ಎನ್.ತಿಪ್ಪಣ್ಣ, ಹೆಚ್.ಆರ್. ಗವಿಯಪ್ಪ, ಹೆಚ್.ಹನುಮಂತಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೊಸಪೇಟೆ ನಗರದ ರೋಟರಿ ವೃತ್ತದಲ್ಲಿ ಹುಡಾ ಅಧ್ಯಕ್ಷ ಅಶೋಕ ಜೀರೆ ಅವರು ಧ್ವಜಾರೋಹಣ ನೆರವೇರಿಸಿದರು. ಇಲ್ಲಿನ ಈ ಸ್ತಂಭ 150 ಅಡಿ ಎತ್ತರವಿದ್ದು, ಅತೀ ದೊಡ್ಡ ಧ್ವಜಸ್ತಂಭ ಎಂಬ ಖ್ಯಾತಿಗೆ ಒಳಪಟ್ಟಿದೆ. ಧ್ವಜಾರೋಹಣದ ಬಳಿಕ ಸಚಿವ ಆನಂದ ಸಿಂಗ್ ಅವರು ರೋಟರಿ ವೃತ್ತದ ಬಳಿ ಆಗಮಿಸಿ ಎಲ್ಲರಿಗೂ ಶುಭ ಕೋರಿದರು.