ಬಳ್ಳಾರಿ: ಸಿರುಗುಪ್ಪ ತಾಲೂಕಿನ ಕರೂರು ಹೋಬಳಿಯ ಉತ್ತನೂರು ಗ್ರಾಮಕ್ಕೆ 1.90 ಎಕರೆ ರುದ್ರಭೂಮಿ ಮಂಜೂರು ಮಾಡಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಆದೇಶಿಸಿದ್ದಾರೆ.
ಉತ್ತನೂರು ಗ್ರಾಮದಲ್ಲಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ವಾಸ್ತವ್ಯ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಉತ್ತನೂರು ಗ್ರಾಮಕ್ಕೆ ಸ್ಮಶಾನ ಜಾಗ ಇಲ್ಲದಿರುವುದರ ಬಗ್ಗೆ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದ ಅವರು, ಖಾಸಗಿ ಜಮೀನು ಖರೀದಿಸಿ ರುದ್ರಭೂಮಿಯ ಆದೇಶದ ಪ್ರತಿಯನ್ನು ಗ್ರಾಮದ ಮುಖಂಡರಿಗೆ ವಿತರಿಸಿದರು. ಈ ಕ್ಷಣಕ್ಕೆ ಸ್ಥಳೀಯ ಶಾಸಕ ಸೋಮಲಿಂಗಪ್ಪ ಸಾಕ್ಷಿಯಾದರು.
ಗ್ರಾಮ ವಾಸ್ತವ್ಯದಲ್ಲಿ ಒಟ್ಟು 213 ಅರ್ಜಿಗಳನ್ನು ಸ್ವೀಕರಿಸಿದ್ದು, ಇದರಲ್ಲಿ 171 ಅರ್ಜಿ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ 126 ಅರ್ಜಿಗಳು ಪಿಂಚಣಿಗೆ ಸಂಬಂಧಿಸಿದ್ದಾಗಿವೆ. 18 ಅರ್ಜಿಗಳಿಗೆ ಹೊಸದಾಗಿ ಪಿಂಚಣಿ ನೀಡಲು ಆದೇಶಿಸಲಾಗಿದೆ. ಇದರ ಜೊತೆಗೆ 4 ಭಾಗ್ಯಲಕ್ಷ್ಮೀ ಬಾಂಡ್ಗಳನ್ನು ಸ್ಥಳದಲ್ಲಿಯೇ ಫಲಾನುಭವಿಗಳ ಪೋಷಕರಿಗೆ ವಿತರಿಸಲಾಯಿತು.
ಸಂಧ್ಯಾ ಸುರಕ್ಷಾ ಯೋಜನೆ, ಪಿಂಚಣಿ ಸೌಲಭ್ಯ, ಭಾಗ್ಯಲಕ್ಷ್ಮೀ ಬಾಂಡ್ಗಳನ್ನು ಒಳಗೊಂಡಂತೆ ಒಟ್ಟು 22 ಅರ್ಜಿಗಳ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಪ್ರಮಾಣ ಪತ್ರ ನೀಡಲಾಯಿತು. ಬಳಿಕ ಜಿಲ್ಲಾಧಿಕಾರಿ ಮನೆ-ಮನೆಗೆ ಭೇಟಿ ನೀಡಿ, ಹಿರಿಯರ ಪಿಂಚಣಿ, ನಿವೇಶನ ನೀಡುವಿಕೆ, ಆಹಾರ ಪದಾರ್ಥಗಳ ವಿತರಣೆ, ರಸ್ತೆಗಳ ದುರಸ್ತಿ ಕುರಿತು ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಡಿಸಿ, ಮನೆಗಳ ಸಮಸ್ಯೆ ತುಂಬಾ ಇದೆ. ಕಂದಾಯ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ಶಾಲೆ ಮತ್ತು ಅಂಗನವಾಡಿಗಳ ಪರಿಶೀಲನೆ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ಪರಿಶೀಲನೆ, ನಿವೇಶನ ನೀಡುವ ವ್ಯವಸ್ಥೆ, ಹಲವಾರು ಯೋಜನೆಗಳನ್ನು ಜಾರಿ ಮಾಡಿ ಅವುಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗಿದೆ. ಮನೆ-ಮನೆಗೆ ಭೇಟಿ ನೀಡಿ ಹಿರಿಯರ ಪಿಂಚಣಿ, ಮನೆಯಿಲ್ಲದವರಿಗೆ ಮನೆ ಮತ್ತು ಜಾಗ ನೀಡುವುದರ ಕುರಿತು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಓದಿ:ಬೆಳಗಾವಿಯಲ್ಲಿ ಕೊರೊನಾ 'ಮಹಾ' ಅಬ್ಬರ : ಗಡಿಯಲ್ಲಿ ನಿರ್ಲಕ್ಷ್ಯ.. ಜನರಿಗೆ ಸಂಕಷ್ಟ