ಬೆಳಗಾವಿ: ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಸ್ಮಾರ್ಟ್ ವಾಚ್ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆದ ಆರೋಪಕ್ಕೆ ಸಂಬಂಧಿಸಿದಂತೆ ಗೋಕಾಕ್ ಶಹರ ಠಾಣೆಯ ಪೊಲೀಸರು ಓರ್ವ ಪರೀಕ್ಷಾರ್ಥಿಯನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗೋಕಾಕ್ ತಾಲೂಕಿನ ಮೂಡಲಗಿ ಗ್ರಾಮದ ಸಿದ್ದಪ್ಪ ಮದಿಹಳ್ಳಿ(20) ಬಂಧಿತ ಆರೋಪಿ. ಕಳೆದ ಭಾನುವಾರ ಗೋಕಾಕ ನಗರದ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಗೋಕಾಕ್ ಮೂಲದ ಪರೀಕ್ಷಾರ್ಥಿಯೊಬ್ಬ ಸ್ಮಾರ್ಟ್ ವಾಚ್ ಬಳಸಿ ಪರೀಕ್ಷಾ ಅಕ್ರಮ ಎಸಗುತ್ತಿದ್ದನು.
ಈ ವೇಳೆ ಬಂಧಿತ ಆರೋಪಿ ಸ್ಮಾರ್ಟ್ ವಾಚ್ ನಲ್ಲಿ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ಕಳುಹಿಸುತ್ತಿದ್ದ. ಬಳಿಕ ಅದೇ ಸ್ಮಾರ್ಟ್ ವಾಚ್ ಗೆ ಬರುವ ಉತ್ತರವನ್ನು ನೋಡಿ ಪರೀಕ್ಷೆ ಬರೆಯುತ್ತಿದ್ದನು. ಇದನ್ನು ಸಿಸಿ ಕ್ಯಾಮರಾದಲ್ಲಿ ಗಮನಿಸಿದ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪರೀಕ್ಷೆಯಲ್ಲಿ ಅಕ್ರಮ ನಡೆಸಿರುವುದು ಗೊತ್ತಾಗುತ್ತಿದ್ದಂತೆ ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗಿದೆ. ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮಗಳು ನಡೆದ ಸಂದೇಹಗಳ ಹಿನ್ನೆಲೆಯಲ್ಲಿ ಬೆಳಗಾವಿ ಎಸ್ಪಿ ಡಾ.ಸಂಜೀವ್ ಪಾಟೀಲ ಈಗಾಗಲೇ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆಯಿಂದ ಮತ್ತಷ್ಟು ಅಕ್ರಮಗಳು ಹೊರಬರುವ ಸಾಧ್ಯತೆಗಳಿದೆ. ಈ ಕುರಿತು ಗೋಕಾಕ್ ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೆಎಎಸ್ ಪರೀಕ್ಷೆ ಪಾಸಾಗಲು ಅಡ್ಡ ದಾರಿ ಹಿಡಿದ ಯುವತಿಗೆ 59 ಲಕ್ಷ ರೂಪಾಯಿ ವಂಚನೆ!