ಮುಂಬೈನಿಂದ ಕಾಲ್ನಡಿಗೆಯಲ್ಲಿಯೇ ಅಥಣಿಗೆ ಬಂದ ಯುವಕ: ಸ್ಥಳೀಯರಲ್ಲಿ ಆತಂಕ
ಕೆಲಸ ಹುಡುಕಿಕೊಂಡು ಯಲ್ಲಮ್ಮನವಾಡಿಯಿಂದ ಮುಂಬೈಗೆ ತೆರಳಿದ್ದ ಯುವಕನೊಬ್ಬ ಅಥಣಿ ತಾಲೂಕಿನ ಯಲ್ಲಮ್ಮನವಾಡಿ ಗ್ರಾಮಕ್ಕೆ ಆಗಮಿಸಿದ್ದಾನೆ. ವಿಷಯ ತಿಳಿದ ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿ ಯುವಕನನ್ನು ತಪಾಸಣೆ ಮಾಡಿ ಹೋಂ ಕ್ವಾರಂಟೈನ್ ಸೀಲ್ ಹಾಕಿ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಿದೆ
ಅಥಣಿ: ಕೊರೊನಾ ವೈರಸ್ ಹಾಟ್ಸ್ಪಾಟ್ ಆದ ಮುಂಬೈನ ಧಾರಾವಿಯಿಂದ ಕಾಲ್ನಡಿಗೆ ಮೂಲಕ ಹೊರಟಿದ್ದ ಯುವಕನೊಬ್ಬ ಅಥಣಿ ತಾಲೂಕಿನ ಯಲ್ಲಮ್ಮನವಾಡಿ ಗ್ರಾಮಕ್ಕೆ ಆಗಮಿಸಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.
ಕೆಲಸ ಹುಡುಕಿಕೊಂಡು ಯಲ್ಲಮ್ಮನವಾಡಿಯಿಂದ ಮುಂಬೈಗೆ ತೆರಳಿದ್ದ ಯುವಕ ಮಂಗಳವಾರ ಸಂಜೆ ಗ್ರಾಮಸ್ಥರ ಕಣ್ಣಿಗೆ ಬೀಳದೇ ತನ್ನ ಮನೆ ಸೇರಿದ್ದ. ಬುಧವಾರ ಈ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಪೊಲೀಸ್, ಆರೋಗ್ಯ ಹಾಗೂ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಡಾ.ಚಂದ್ರಕಾಂತ ಧೂಳಶೆಟ್ಟಿ ಹಾಗೂ ಐಗಳಿ ಪಿಎಸ್‌ಐ ಕೆ.ಎಸ್.ಕೋಚರಿ ಸ್ಥಳಕ್ಕೆ ಆಗಮಿಸಿ ಯುವಕನ ವಿಚಾರಣೆ ನಡೆಸಿದರು. ಈ ವೇಳೆ ಯುವಕ ಕಾಲ್ನಡಿಗೆಯಲ್ಲಿ ಬಂದಿದ್ದಾಗಿ ತಿಳಿಸಿದ್ದಾನೆ. ಬಳಿಕ ಯುವಕನನ್ನು ತಪಾಸಣೆ ಮಾಡಿ ಹೋಂ ಕ್ವಾರಂಟೈನ್ ಸೀಲ್ ಹಾಕಿ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಲಾಗಿದೆ.
ಗ್ರಾಮಸ್ಥರು ಯುವಕನನ್ನು ಗ್ರಾಮದಿಂದ 14 ದಿನಗಳ ಕಾಲ ಬೇರೆ ಕಡೆ ಕ್ವಾರಂಟೈನ್‌ನಲ್ಲಿ ಇಡುವಂತೆ ಪಟ್ಟು ಹಿಡಿದರು. ಬಳಿಕ ಪೊಲೀಸರು ಸ್ಥಳೀಯರ ಮನವೊಲಿಸಿ, ಎಲ್ಲೂ ಸುತ್ತಾಡದಂತೆ ಯುವಕನಿಗೆ ತಾಕೀತು ಮಾಡಿ ಮನೆಯಲ್ಲೇ ಇರುವಂತೆ ತಿಳಿಸಿದ್ದಾರೆ.