ಬೆಳಗಾವಿ: ಪ್ರೇಯಸಿಯು ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಪ್ರಿಯಕರನೇ ಕತ್ತು ಬಿಗಿದು ಕೊಲೆಗೈದು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬಸವ ಕಾಲೋನಿಯಲ್ಲಿ ನಡೆದಿದೆ. ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಗ್ರಾಮದ ರಾಮಚಂದ್ರ ತೆಣಗಿ (29) ಎಂಬಾತ ತಾನು ಪ್ರೀತಿಸುತ್ತಿದ್ದ ರೇಣುಕಾ ಎಂಬುವಳನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ರೇಣುಕಾ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಮಚಂದ್ರ ತೆಣಗಿ ರಾಜ್ಯಶಾಸ್ತ್ರದಲ್ಲಿ ಉನ್ನತ ಪದವಿ ವ್ಯಾಸಂಗ ಮಾಡುತ್ತಿದ್ದ. ಕೊಲೆಯಾದ ರೇಣುಕಾ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇವರಿಬ್ಬರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ರೇಣುಕಾ ತನ್ನನ್ನು ಮರೆತುಬಿಡು ಇದೊಂದು ಕೆಟ್ಟ ಕನಸು ಅಂತಾ ಹೇಳಿ ಬ್ರೇಕ್ ಅಪ್ ಮಾಡಿಕೊಂಡಿದ್ದಳಂತೆ.
ಇದರಿಂದ ಆಘಾತಗೊಂಡಿದ್ದ ರಾಮಚಂದ್ರ ಮನೆಯಲ್ಲಿ ಒಪ್ಪಿಸಿ ಮದುವೆ ಆಗೋಣ ಅಂತಾ ಹೇಳಿದ್ದನಂತೆ. ಆದ್ರೆ, ಇದಕ್ಕೆ ಒಪ್ಪದ ರೇಣುಕಾ ಬೇಡ ಅಂದಿದ್ದಳಂತೆ. ಹೀಗಾಗಿ ರಾಮಚಂದ್ರ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದು, ಗುರುವಾರ ರಾತ್ರಿ ಆಕೆಯ ಇರುತ್ತಿದ್ದ ಬಸವ ಕಾಲೋನಿಯಲ್ಲಿನ ಬಾಡಿಗೆ ಮನೆಗೆ ಬಂದಿದ್ದಾನೆ. ಈ ವೇಳೆ ಆತ ತಂದಿದ್ದ ಸ್ಕಿಪ್ಪಿಂಗ್ ವೈರ್ನಿಂದ ಕತ್ತು ಹಿಸುಕಿ ಕೊಲೆ ಮಾಡಿ, ಬಳಿಕ ತಾನು ಅದೇ ವೈರ್ನಿಂದ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.