ಬೆಳಗಾವಿ/ಬೆಂಗಳೂರು:ನಾವಿಬ್ಬರೂ ಭೇಟಿಯಾದ ವೇಳೆ ರಾಜಕೀಯದ ಬಗ್ಗೆ ಒಂದೂ ಶಬ್ದ ಚರ್ಚೆ ಆಗಿಲ್ಲ. ಚುನಾವಣೆ ಪ್ರಚಾರಕ್ಕಾಗಿ ಹುಬ್ಬಳ್ಳಿಗೆ ಹೋಗುವುದಾಗಿ ಅವರು ಹೇಳಿದರು. ನಾನು ಬೆಳಗಾವಿಗೆ ಹೊರಟಿರುವೆ ಎಂದೆ ಎಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಭೇಟಿ ವಿಚಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಿರೀಕ್ಷಿತವಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಮುಖಾಮುಖಿಯಾದರು. ವಿಮಾನ ನಿಲ್ದಾಣದ ವಿಐಪಿ ಗೆಸ್ಟ್ ಹೌಸ್ನಲ್ಲಿ ಕುಳಿತು ಇಬ್ಬರು ನಾಯಕರು ಮಾತನಾಡಿದರು. ರಾಜ್ಯಸಭಾ ಚುನಾವಣೆ ಸಮಯದಲ್ಲಿ ಇಬ್ಬರು ನಾಯಕರು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಬಿಎಸ್ವೈ, ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಯಾವುದೇ ವಿರೋಧವಿಲ್ಲ. ಅವರು ವಿರೋಧ ಪಕ್ಷದಲ್ಲಿರುವಾಗ ನಾವು ವಿರೋಧ ಮಾಡಬೇಕು ಅಂತಿದೆಯಾ? ರಾಜಕಾರಣದಲ್ಲಿ ಆತ್ಮೀಯತೆ, ವಿಶ್ವಾಸಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಅವರು ಅವರ ಪಕ್ಷಕ್ಕೆ ಕೆಲಸ ಮಾಡುತ್ತಿದ್ದಾರೆ. ನಾನು ನಮ್ಮ ಪಕ್ಷಕ್ಕೆ ಕೆಲಸ ಮಾಡುತ್ತಿದ್ದೇನೆ ಎಂದರು.