ಕರ್ನಾಟಕ

karnataka

ETV Bharat / state

ಕೃಷ್ಣಾ ತೀರಕ್ಕೆ ಸಿಎಂ... ಬಂಪರ್​ ಪರಿಹಾರ ಘೋಷಿಸುವರೇ ಬಿಎಸ್​ವೈ? - ಸಿಎಂ ಬಿಎಸ್​ವೈ

ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಬೆಳಗಾವಿಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಈ ವೇಳೆ ಸಂತ್ರಸ್ತರಿಗೆ ಬಂಪರ್​ ಪರಿಹಾರ ಘೋಷಿಸುವ ನಿರೀಕ್ಷೆಯಲ್ಲಿ ಅಲ್ಲಿನ ಜನರಿದ್ದಾರೆ.

ಬಿ.ಎಸ್.ಯಡಿಯೂರಪ್ಪ

By

Published : Aug 5, 2019, 10:13 AM IST

ಬೆಳಗಾವಿ:ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕೃಷ್ಣಾ ನದಿ ಜತೆಗೆ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ರೌದ್ರಾವತಾರ ತಾಳಿವೆ. ನೀರಿನ ಪ್ರಮಾಣ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ನದಿ ತೀರದ ಜನರು ತತ್ತರಿಸಿದ್ದಾರೆ.

ಗದ್ದೆಗಳಿಗೆ ನೀರು ನುಗ್ಗಿ 10 ಸಾವಿರಕ್ಕೂ ಅಧಿಕ ಹೆಕ್ಟೇರ್​​ ಕೃಷಿ ಭೂಮಿ ಜಲಾವೃತಗೊಂಡಿದೆ. ಘಟನೆಯಿಂದ ಸಾಕಷ್ಟು ಪ್ರಮಾಣದಲ್ಲಿ ಆಸ್ತಿ-ಜೀವಹಾನಿ ಆಗಿದ್ದು, ಜನಜೀವನ ಬೀದಿಗೆ ಬಂದಿದೆ. ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಸಮೀಕ್ಷೆ ಬಳಿಕ ಬಂಪರ್ ಪರಿಹಾರ ಘೋಷಣೆ ನಿರೀಕ್ಷೆಯಲ್ಲಿ ಈ ಭಾಗದ ಜನರಿದ್ದಾರೆ.

ಕಳೆದ ಒಂಭತ್ತು ದಿನಗಳಿಂದ‌ ಸುರಿಯುತ್ತಿರುವ ಮಳೆ ಹಾಗೂ ಕೃಷ್ಣಾ ನದಿ ಪ್ರವಾಹಕ್ಕೆ ಬೆಳಗಾವಿ ಜಿಲ್ಲೆಯ ಜನರು ಅಕ್ಷರಶಃ ನಲುಗಿದ್ದಾರೆ. ಜಿಲ್ಲೆಯಾದ್ಯಂತ ವಿವಿಧ ಗ್ರಾಮಗಳಿಗೆ ಸಂಪರ್ಕಿಸುವ ಹದಿನೈದಕ್ಕೂ ಅಧಿಕ ಸೇತುವೆಗಳು ಹಾನಿಗೊಳಗಾಗಿವೆ. ಪ್ರವಾಹದಿಂದ ಬೆಳಗಾವಿ, ಖಾನಾಪುರ, ಗೋಕಾಕ, ಚಿಕ್ಕೋಡಿ, ನಿಪ್ಪಾಣಿ, ಅಥಣಿ, ರಾಯಬಾಗ, ಕಾಗವಾಡ ತಾಲೂಕುಗಳಲ್ಲಿ ಅತೀ ಹೆಚ್ಚು ಬೆಳೆ ಹಾನಿಯಾಗಿದೆ. ಮುನ್ನೂರಕ್ಕೂ ಅಧಿಕ ಮನೆಗಳು ಹಾಗೂ ಲಕ್ಷಾಂತರ ಮೌಲ್ಯದ ಕೃಷಿ ಉಪಕರಣಗಳು ಕೊಚ್ಚಿಕೊಂಡು ಹೋಗಿವೆ.

ಗೋಕಾಕ ತಾಲೂಕಿನಲ್ಲಿ ಒಂದು ಪ್ರಾಣಹಾನಿ, ಒಂದು ಜಾನುವಾರು ಹಾನಿ ಸಂಭವಿಸಿದೆ. ಸಿಎಂ ಯಡಿಯೂರಪ್ಪ ಇಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದು, ಹೆಚ್ಚಿನ ಪರಿಹಾರ ಘೋಷಿಸುವಂತೆ ಸಂತ್ರಸ್ತರು ಆಗ್ರಹಿಸುತ್ತಿದ್ದಾರೆ.

ABOUT THE AUTHOR

...view details