ಕ್ರೇನ್ ಸೀಲಿಂಗ್ ತುಂಡಾಗಿ ಕಾರ್ಮಿಕ ಸಾವು ಚಿಕ್ಕೋಡಿ: ಕ್ರೇನ್ ಸೀಲಿಂಗ್ ತುಂಡಾಗಿ ಬಿದ್ದು ಓರ್ವ ಕಾರ್ಮಿಕ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜಂಬಗಿ ಗ್ರಾಮದಲ್ಲಿ ಇಂದು ನಡೆದಿದೆ. ಮಧ್ಯಪ್ರದೇಶದ ಸಂತೋಷ ಮುಣ್ಣಾ ವಿಶ್ವಕರ್ಮ (28) ಮೃತಪಟ್ಟಿದ್ದಾರೆ.
ಜಂಬಗಿ ಗ್ರಾಮದ ಶಾವಂತ ಪಾಟೀಲ್ ಎಂಬ ರೈತನ ಜಮೀನಿನಲ್ಲಿ ಮಧ್ಯಪ್ರದೇಶದ ಐವರು ಕಾರ್ಮಿಕರು ಬಾವಿ ಕೊರೆಯುವ ಕೆಲಸ ಮಾಡುತ್ತಿದ್ದರು. ಇಬ್ಬರು ಬಾವಿಗಿಳಿಯುತ್ತಿದ್ದ ಸಂದರ್ಭದಲ್ಲಿ ಕ್ರೇನ್ ಸೀಲಿಂಗ್ ತುಂಡಾಗಿದೆ. ಅಂದಾಜು ನೂರು ಅಡಿ ಆಳದ ಬಾವಿಗೆ ಸೀಲಿಂಗ್ ಬೀಳುತ್ತಿದ್ದಂತೆ ಸಂತೋಷ್ ಸ್ಥಳದಲ್ಲೇ ಮೃತಪಟ್ಟರು. ಪ್ರಮೋದ್ ಮಂಡವಿ ಎಂಬವರು ಗಂಭೀರವಾಗಿ ಗಾಯಗೊಂಡರು. ಗಾಯಾಳುವನ್ನು ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಅಥಣಿ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಹೊರತೆಗೆದಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಕಾರದ ವಿರುದ್ಧ ಆಕ್ರೋಶ: ಕಾಗವಾಡ ಅಥಣಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಸವೇಶ್ವರ ಏತ ನೀರಾವರಿ ಎಂಬುದು ಪ್ರಮುಖ ಯೋಜನೆ. ಜನಪ್ರತಿನಿಧಿಗಳ ಹಿತಾಶಕ್ತಿಯ ಕೊರತೆಯಿಂದ ಕಳೆದ 7 ವರ್ಷಗಳಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ಕುಡಿಯುವ ನೀರಿಗೂ ಕೂಡ ನಾವು ಪರಿತಪಿಸುವಂತಾಗಿದೆ. ನೂರಡಿ ಆಳ ಬಾವಿ ತೆಗೆದರೂ ನೀರು ಸಿಗುತ್ತಿಲ್ಲ. ಇವತ್ತಿನ ಈ ಘಟನೆಗೂ ಸರ್ಕಾರವೇ ಕಾರಣ ಎಂದು ಆರೋಪಿಸಿ, ಕಾರ್ಮಿಕರಿಗೆ ಸರ್ಕಾರ ಸೂಕ್ತ ಪರಿಹಾರ ಮತ್ತು ಚಿಕಿತ್ಸಾ ವೆಚ್ಚ ಭರಿಸಬೇಕೆಂದು ರೈತ ಮುಖಂಡ ಲಕ್ಷ್ಮಣ್ ಸಂಬರಗಿ ಆಗ್ರಹಿಸಿದರು.
ಗೋದಾಮಿನಲ್ಲಿ ದುರಂತ:ನಿನ್ನೆ ವಿಜಯಪುರದಲ್ಲಿ ಬೃಹತ್ ಆಹಾರ ಶೇಖರಣಾ ಗೋದಾಮಿನಲ್ಲಿ ಮೆಕ್ಕೆಜೋಳದ ಚೀಲಗಳು ಕುಸಿದುಬಿದ್ದು 7 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿತ್ತು. ರಾಜಗುರು ಇಂಡಸ್ಟ್ರೀಸ್ ಗೋದಾಮಿನಲ್ಲಿ ಫುಡ್ ಪ್ರೊಸೆಸಿಂಗ್ ಯೂನಿಟ್ನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಘಟನೆ ಸಂಭವಿಸಿತ್ತು.
ಟ್ಯಾಂಕ್ ಸ್ವಚ್ಛತೆ- ಕಾರ್ಮಿಕರು ಸಾವು:ಟ್ಯಾಂಕ್ ಸ್ವಚ್ಛಗೊಳಿಸಲು ಒಳಗಿಳಿದ ಕಾರ್ಮಿಕರು ಸಾವನ್ನಪ್ಪಿರುವ ದುರ್ಘಟನೆ ಕೆಲವು ದಿನಗಳ ಹಿಂದೆ ಸೂರತ್ನ ಕಿರಣ್ ಇಂಡಸ್ಟ್ರೀಸ್ ಎಂಬ ಮಿಲ್‌ನಲ್ಲಿ ನಡೆದಿತ್ತು. ಮಿಲ್‌ನಲ್ಲಿ ನಾಲ್ವರು ಕಾರ್ಮಿಕರು ಸ್ವಚ್ಛಗೊಳಿಸಲೆಂದು ಟ್ಯಾಂಕ್ನ ಒಳಗಿಳಿದಿದ್ದರು. ಆದರೆ, ಟ್ಯಾಂಕ್ನೊಳಗೆ ಆಮ್ಲಜನಕದ ಕೊರತೆ ಉಂಟಾಗಿ ಉಸಿರಾಡಲಾರದೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿತ್ತು.
ಇದನ್ನೂ ಓದಿ:ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ನಾಲ್ವರು ಕಾರ್ಮಿಕರ ಸಾವು