ಬೆಳಗಾವಿ:ಗರ್ಭಕೋಶದ ಅನಧಿಕೃತ ಶಸ್ತ್ರಚಿಕಿತ್ಸೆಗೆ ಒಳಗಾಗಿ ಅನಾರೋಗ್ಯದಿಂದ ಬಳಲುತ್ತಿರುವ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ನೂರಾರು ಸಂತ್ರಸ್ತ ಮಹಿಳೆಯರು ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ, ಇಂದು ಬೆಳಗಾವಿಯ ಸುವರ್ಣ ಗಾರ್ಡನ್ ಬಳಿಯ ಟೆಂಟ್ನಲ್ಲಿ ಧರಣಿ ನಡೆಸಿದರು. ಮನವಿ ಆಲಿಸಲು ಸ್ಥಳಕ್ಕೆ ಆಗಮಿಸಿದ ಸಚಿವ ರಾಮಲಿಂಗಾರೆಡ್ಡಿ ಅವರ ಮುಂದೆ ಮಹಿಳೆಯರು ಕಣ್ಣೀರು ಹಾಕಿದರು.
ರಾಣೆಬೆನ್ನೂರಿನ ಸರ್ಕಾರಿ ವೈದ್ಯೆ ಡಾ.ಶಾಂತ ಪಿ. ಅವರ ದುಷ್ಕೃತ್ಯದಿಂದ 2013ರಿಂದ 2017ರ ಅವಧಿಯಲ್ಲಿ 1522 ಮಹಿಳೆಯರು ನಿತ್ಯ ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಹೊಟ್ಟೆ ನೋವಿಗೆ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗೆ ತೆರಳಿದ ಈ ಮಹಿಳೆಯರಿಗೆ ಅನಧಿಕೃತವಾಗಿ ಗರ್ಭಕೋಶದ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಚಿಕಿತ್ಸೆಯ ಬಳಿಕ ಎಲ್ಲರಲ್ಲೂ ಹಲವು ರೀತಿಯ ಅನಾರೋಗ್ಯ ಕಾಣಿಸಿಕೊಂಡಿವೆ. ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗಿದ್ದೇವೆ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡರು.