ಬೆಳಗಾವಿ: ಹೊರಗುತ್ತಿಗೆ ಆಧಾರದ ಮೇಲೆ ಬದುಕು ರೂಪಿಸಿಕೊಳ್ಳಲು ನೀಡುವ ಕೆಲಸವನ್ನು ರಾಮದುರ್ಗ ತಹಶೀಲ್ದಾರ್ ಕಸಿದುಕೊಂಡಿದ್ದಾರೆ ಎಂದು ಆರೋಪಿಸಿ ದಿವ್ಯಾಂಗ ಯುವತಿಯೊಬ್ಬಳು ಜಿಲ್ಲಾಡಳಿತದ ಕಚೇರಿ ಎದುರು ಧರಣಿ ನಡೆಸಿದ್ದಾರೆ.
ಕೆಲಸಕ್ಕಾಗಿ ಆಗ್ರಹಿಸಿ ದಿವ್ಯಾಂಗ ಯುವತಿ ಧರಣಿ: ಕ್ಯಾರೆ ಎನ್ನದ ಡಿ.ಸಿ ಬೊಮ್ಮನಹಳ್ಳಿ - ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಯುವತಿ ಪ್ರತಿಭಟನೆ
ಅನುಕಂಪದ ಆಧಾರದ ಮೇಲೆ ಕೆಸಲ ನೀಡಿ ಸರಿಯಾದ ಸಂಬಳ ಕೊಟ್ಟಿಲ್ಲ ಎಂದು ಆರೋಪಿಸಿ ದಿವ್ಯಾಂಗ ಯುವತಿಯೊಬ್ಬಳು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದಾರೆ.
ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದ ದಿವ್ಯಾಂಗ ಯುವತಿ ಸಲೀಮಾ ಧರಣಿ ನಡೆಸಿದಾಕೆ. ಈಕೆಗೆ 2018ರ ಡಿ.26ರಂದು ಹೆಚ್. ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಅನುಕಂಪದ ಆಧಾರದಲ್ಲಿ ಈಕೆಗೆ ಕೆಲಸ ನೀಡುವಂತೆ ನಿರ್ದೇಶನ ನೀಡಿದ್ದರು. ಇದಾದ ಬಳಿಕ ಬಿಎ ಪದವೀಧರೆ ಆದ ಸಲೀಮಾಗೆ ರಾಮದುರ್ಗ ತಹಶಿಲ್ದಾರ್ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಗಿತ್ತು. ಆದರೆ, ಕಳೆದ ಅಕ್ಟೋಬರ್ನಿಂದ ಮಾರ್ಚ್‌ವರೆಗೂ ಕೆಲಸ ಮಾಡಿದ್ದರೂ ತಿಂಗಳಿಗೆ ಐದು ಸಾವಿರ ರೂಪಾಯಿ ಸಂಬಳ ನೀಡುವುದಾಗಿ ಹೇಳಿ ಈ ಅವಧಿಯಲ್ಲಿ ಕೇವಲ 10 ಸಾವಿರ ಸಂಬಳ ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಡಿಸಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಎದುರು ದಿವ್ಯಾಂಗ ಯುವತಿ ಅಳಲು ತೋಡಿಕೊಂಡಳು. ಕೇವಲ ಹತ್ತು ಸಾವಿರ ರೂಪಾಯಿ ಸಂಬಳ ನೀಡಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ. ಕೆಲಸ ಕೇಳಿದ್ರೆ ಯಾವ ಕೆಲಸವೂ ಖಾಲಿ ಇಲ್ಲ ಎನ್ನುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಈ ವೇಳೆ ಗುತ್ತಿಗೆ ಆಧಾರದ ಮೇಲೆ ಯಾವುದಾದರೂ ಕೆಲಸ ಕೊಡಿಸುವೆ ಎಂದಾಗ ನನಗೆ ಈಗಲೇ ಸರಿಯಾಗಿ ಸಂಬಳ ಸಿಗುವ ಕೆಲಸ ನೀಡಿ ಎಂದು ಸ್ಥಳದಲ್ಲೇ ಕುಳಿತು ಪ್ರತಿಭಟನೆ ಆರಂಭಿಸಿದರು. ನಾನು ಹೇಳಿದ್ದನ್ನು ಅರ್ಥ ಮಾಡಿಕೊಳ್ಳುವುದನ್ನು ಬಿಟ್ಟು ಹೀಗೆ ಮಾಡಿದರೆ ಹೇಗೆ ಎಂದು ಯುವತಿಗೆ ಹೇಳಿದ ಡಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.