ಬೆಂಗಳೂರು: ಉಪ ಸಭಾಪತಿ ಆನಂದ್ ಮಾಮನಿ ಸೇರಿದಂತೆ ಇತ್ತೀಚೆಗೆ ಅಗಲಿದ 10 ಮಂದಿ ಗಣ್ಯರಿಗೆ ವಿಧಾನ ಪರಿಷತ್ನಲ್ಲಿ ಸಂತಾಪ ಸೂಚಿಸಲಾಯಿತು. ಮೃತ ಗಣ್ಯರು ರಾಜಕೀಯ, ಸಾಮಾಜಿಕ ಕ್ಷೇತ್ರಕ್ಕೆ ನೀಡಿದ್ದ ಕೊಡುಗೆಯನ್ನು ಸದನದಲ್ಲಿ ಸ್ಮರಿಸಲಾಯಿತು. ನಂತರ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು.
ಕುಂದಾನಗರಿಯ ಸುವರ್ಣಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ವಂದೇಮಾತರಂ ಗೀತೆಯೊಂದಿಗೆ ವಿಧಾನ ಪರಿಷತ್ ಕಲಾಪವನ್ನು ಆರಂಭಿಸಲಾಯಿತು. ಕಲಾಪ ಆರಂಭಗೊಳ್ಳುತ್ತಿದ್ದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆಯನ್ನು ಸಭಾಪತಿ ರಘುನಾಥರಾವ್ ಮಲ್ಕಾಪುರೆ ಮಂಡಿಸಿದರು. ಉಪ ಸಭಾಪತಿ ಆನಂದ ಮಾಮನಿ, ಮಾಜಿ ಸಚಿವ ಜಬ್ಬರ್ ಖಾನ್ ಹೊನ್ನಳ್ಳಿ, ಮಾಜಿ ಸಚಿವ ಎಸ್.ಎಸ್.ಪೂಜಾರಿ, ಮಾಜಿ ಸಚಿವ ಸುದೀಂಧ್ರರಾವ್ ಕಸಬೆ, ಮಾಜಿ ಸಂಸದ ಕೋಳೂರು ಬಸವನಗೌಡರು, ರಾಜ್ಯಸಭೆ ಮಾಜಿ ಸದಸ್ಯ ಅಬ್ದುಲ್ ಸಿದ್ದಕಿ, ನಟ ಟಿ.ಎಸ್.ಲೋಹಿತಾಶ್ವ, ಯಕ್ಷಗಾನ ಭಾಗವತ ಬಂಗಾರ್ ಆಚಾರ್, ಆಧುನಿಕ ಭಗೀರಥ ಕಲ್ಮನೆ ಕಾಮೇಗೌಡ, ವೇದಾಂತ ವಿಜ್ಞಾನಿ ಡಾ.ಆರ್.ಎಲ್ ಕಶ್ಯಪ್ ನಿಧನಕ್ಕೆ ಸಂತಾಪ ಸೂಚನೆ ಮಂಡಿಸಿದರು.
ಸಭಾಪತಿಗಳು ಮಂಡಿಸಿದ ಸಂತಾಪ ಸೂಚನೆ ನಿರ್ಣಯಕ್ಕೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸಹಮತ ವ್ಯಕ್ತಪಡಿಸಿದರು. ಮಾಮನಿ ಸೇರಿ 10 ಜನರ ನಿಧನಕ್ಕೆ ಸರ್ಕಾರದ ಪರ ಸಹಮತವಿದೆ. ಆನಂದ್ ಮಾಮನಿ ಅನಾರೋಗ್ಯದ ನಡುವೆ ನಮ್ಮ ಜೊತೆ ಮುಂಗಾರು ಅಧಿವೇಶನದಲ್ಲಿ ಕೆಲಸ ಮಾಡಿದ್ದರು. ಹತ್ತಿ ವ್ಯಾಪಾರದಿಂದ ವಿಧಾನಸೌಧದವರೆಗೆ ಶಕ್ತಿ ಕ್ರೋಢೀಕರಿಸಿಕೊಂಡು ಬೆಳೆಯಲು ಮಾಮನಿ ನಿದರ್ಶನ ಎಂದು ವ್ಯಾಖ್ಯಾನಿಸಲಾಗಿತ್ತು.
56 ವರ್ಷ ಬದುಕಿದ್ದ ಮಾಮನಿ ಕ್ಷೇತ್ರದ ಜನತೆ ಜೊತೆ ಭಾವನಾತ್ಮಕ ಸಂಬಂಧ ಇರಿಸಿಕೊಂಡಿದ್ದರು. ನೀರಾವರಿ ಕ್ಷೇತ್ರದ ಬಗ್ಗೆ ಆಸಕ್ತಿ ವಹಿಸಿ ಕೆಲಸ ಮಾಡಿದ್ದರು. ಆಧ್ಯಾತ್ಮದಲ್ಲಿಯೂ ಅವರಿಗೆ ವಿಶೇಷ ಆಸಕ್ತಿ ಇತ್ತು. ಸವದತ್ತಿಯ ಎಲ್ಲ ಸಮಸ್ಯೆ ಪರಿಹರಿಸಿ ಧಾರ್ಮಿಕ ಕೇಂದ್ರದಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಿದ್ದರು. ಮೂರು ಬಾರಿ ಶಾಸಕರಾಗಿದ್ದರು, ಅವರ ತಂದೆಯೂ ಉಪ ಸಭಾಧ್ಯಕ್ಷರಾಗಿದ್ದರು, ಅವರಂತೆ ಇವರೂ ಉಪ ಸಭಾಧ್ಯಕ್ಷರಾಗಿದ್ದರು. ಯೋಗ್ಯ ಶಾಸಕ, ರಾಜಕಾರಣಿಯನ್ನು ರಾಜ್ಯ ಕಳೆದುಕೊಂಡಂತಾಗಿದೆ ಎಂದರು.
ಜಬ್ಬರ್ ಖಾನ್ ಹೊನ್ನಳ್ಳಿ ಶಿಕ್ಷಕರಾಗಿ ಕೆಲಸ ಮಾಡಿ ಧರಂ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದರು. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಎಸ್.ಎಸ್.ಪೂಜಾರಿ ಶಿಕ್ಷಕ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಶಿಕ್ಷಣ, ಮತ್ತು ಶಿಕ್ಷಕರ ಬಗ್ಗೆ ಬಹಳ ಕಾಳಜಿ ಹೊಂದಿದ್ದರು. ಸುದೀಂಧ್ರರಾವ್ ಕಸಬೆ, ಗುಂಡೂರಾವ್ ಸಂಪುಟದಲ್ಲಿ ಸಚಿವರಾಗಿ, ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ದುಡಿದಿದ್ದರು. ಹಿಂದುಳಿದ, ಕೃಷಿಕರ ಬಗ್ಗೆ ರಾಜಕಾರಣ ಮಾಡಿದ್ದರು.
ಕೋಳೂರು ಬಸವನಗೌಡರು ಸಂಸದರಾಗಿ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ರಾಜ್ಯಸಭೆ ಮಾಜಿ ಸದಸ್ಯ ಅಬ್ದುಲ್ ಸಿದ್ದಕಿ, ನಗರಸಭೆಯಿಂದ ರಾಜ್ಯಸಭೆವರೆಗೆ ರಾಜಕಾರಣದ ಬುದುಕು ಬೆಳೆಸಿಕೊಂಡು, ಪ್ರೌಢ, ಪ್ರಾಥಮಿಕ ಶಾಲೆ ತೆರೆದಿದ್ದರು. ಇವರ ನಿಧನದಿಂದ ಸಾಮಾಜಿಕ ಕ್ಷೇತ್ರ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ. ಟಿಎಸ್ ಲೋಹಿತಾಶ್ವ, ಒಳ್ಳೆಯ ರಂಗಕಲಾವಿದ, ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಟಕ ಅಕಾಡಮಿ ಪ್ರಶಸ್ತಿ ಪಡೆದಿದ್ದರು. ಶ್ರೇಷ್ಟ ರಂಗಕರ್ಮಿ ಕಳೆದುಕೊಂಡಿದೆ ಎಂದರು.