ಬೆಳಗಾವಿ : ಗ್ವಾಲಿಯರ್ ಸಮೀಪ ಸಂಭವಿಸಿದ ವಾಯುಪಡೆಯ ಯುದ್ಧ ವಿಮಾನಗಳ ಪತನದಲ್ಲಿ ಹುತಾತ್ಮರಾದ ಪೈಲಟ್ ಮತ್ತು ವಿಂಗ್ ಕಮಾಂಡರ್ ಬೆಳಗಾವಿಯ ಗಣೇಶಪುರದ ಹನುಮಂತರಾವ್ ರೇವಣಸಿದ್ದಪ್ಪ ಸಾರಥಿ ಅವರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ನೆರವೇರಿತು. ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತರ ಅಂತಿಮ ವಿಧಿವಿಧಾನಗಳು ನೆರವೇರಿದವು. ವೀರ ಯೋಧ ಹನುಮಂತರಾವ್ ಸಾರಥಿ ಅವರು ಪಂಚಭೂತಗಳಲ್ಲಿ ಲೀನರಾದರು.
ಮೃತ ಯೋಧನ ಪಾರ್ಥಿವ ಶರೀರವನ್ನು ಸೇನೆಯ ವಿಶೇಷ ವಿಮಾನದ ಮೂಲಕ ಭಾನುವಾರ ಮಧ್ಯಾಹ್ನ 12.30 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಈ ವೇಳೆ ವಿಮಾನ ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ವಿ.ದರ್ಶನ್ ಮತ್ತಿತರೆ ಗಣ್ಯರು ಪುಷ್ಪಗುಚ್ಛ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದ್ದರು. ಬಳಿಕ ಸೇನಾ ವಾಹನದಲ್ಲಿ ಹುಟ್ಟೂರಿಗೆ ಪಾರ್ಥಿವ ಶರೀರ ತರಲಾಗಿತ್ತು.