ಬೆಂಗಳೂರು/ಬೆಳಗಾವಿ: ನಕಲಿ ದಾಖಲೆ ಕೊಟ್ಟರೆ ಸಬ್ ರಿಜಿಸ್ಟ್ರಾರ್ ವಿಧಾನಸೌಧವನ್ನೂ ನನ್ನ ಹೆಸರಿಗೆ ನೋಂದಣಿ ಮಾಡಿಸಿಕೊಡುತ್ತಾರಾ ಎಂದು ಕಾಂಗ್ರೆಸ್ ಶಾಸಕ ಕೃಷ್ಣ ಭೈರೇಗೌಡ ಪ್ರಶ್ನಿಸಿದರು.
ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ವಿಷಯ ಪ್ರಸ್ತಾಪಿಸಿದ ಕೃಷ್ಣ ಭೈರೇಗೌಡ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕು ಕಟ್ಟಿಗೇನಹಳ್ಳಿಯಲ್ಲಿ ಖಾಸಗಿ ಬಡಾವಣೆಯನ್ನು ನಿರ್ಮಿಸಿ ಬಿಬಿಎಂಪಿಯ ನಕಲಿ ಖಾತೆಗಳನ್ನು ಸೃಷ್ಟಿಸಿ, ನಿವೇಶನಗಳ ಪರಭಾರೆ ನೋಂದಣಿಯನ್ನು ಮಾಡಿ ಅಮಾಯಕ ಖರೀದಿದಾರರಿಗೆ ಮೋಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ನಕಲಿ ಖಾತೆ ಸೃಷ್ಟಿಸಿ, ವಿಧಾನಸೌಧದ ಮಾಲೀಕ ನಾನು ಎಂದು ಹೇಳಿ, ಪರಾಭಾರೆ ಮಾಡಿದರೆ ಅದನ್ನೂ ನೋಂದಾಣಿ ಮಾಡುತ್ತೀರಾ?. ನೋಂದಣಿ ಇಲಾಖೆಯ ನೀತಿ ಏನಿದೆ?. ಸಬ್ ರಿಜಿಸ್ಟ್ರಾರ್ ಆಸ್ತಿಗಳ ದಾಖಲೆಗಳ ನೈಜತೆ ಪರಿಶೀಲಿಸುವುದು ನಮ್ಮ ಕೆಲಸ ಅಲ್ಲ ಅಂದರೆ, ವಿಧಾನಸೌಧವನ್ನು ನಕಲಿ ದಾಖಲೆ ಆಧಾರದಲ್ಲಿ ರಿಜಿಸ್ಟರ್ ಮಾಡಿ ಕೊಡುತ್ತಾರೆ. ಕಂದಾಯ ಸಚಿವರು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಕಾನೂನು ದುರಪಯೋಗ ಪಡಿಸದ ರೀತಿಯಲ್ಲಿ ಸೂಕ್ತ ತಿದ್ದುಪಡಿ ತರಬೇಕು ಎಂದು ಮನವಿ ಮಾಡಿದರು.
ಬಿಬಿಎಂಪಿಯ ಖಾತೆ ನಕಲಿ ಮಾಡಿ 16 ಎಕರೆ ಪ್ರದೇಶದಲ್ಲಿ ಅನಧಿಕೃತ ಖಾಸಗಿ ಬಡಾವಣೆ ಮಾಡಿ, 70 ಸೈಟ್ ನೋಂದಣಿ ಮಾಡಿ ಕೊಟ್ಟಿದ್ದಾರೆ. ಈ ಬಗ್ಗೆ ಬಿಬಿಎಂಪಿ ಖಾತೆ ನಕಲಿ ಮಾಡಿಸಿದ್ದಾರೆ ಎಂದು ಬಿಬಿಎಂಪಿ ಕಂದಾಯ ಅಧಿಕಾರಿಗಳೇ ದೂರು ನೀಡಿದ್ದಾರೆ. ಆದರೆ ಈಗಲೂ ನೋಂದಣಾಧಿಕಾರಿಗಳೇ ನೋಂದಣಿ ಮಾಡುತ್ತಿದ್ದಾರೆ. ಈ ಬಗ್ಗೆ ಐಜಿಆರ್ ಗಮನಕ್ಕೂ ತಂದು ಪೊಲೀಸ್ ದೂರನ್ನೂ ಕೊಟ್ಟಿದ್ದಾರೂ ಯಾವುದೇ ವಿಚಾರಣೆ ಮಾಡಿಲ್ಲ ಎಂದು ಹೇಳಿದರು.