ಕರ್ನಾಟಕ

karnataka

ETV Bharat / state

ಕೇಂದ್ರದ ನಫೇಡ್ ಮೂಲಕ ಎಂಎಸ್‌ಪಿ ಅಡಿ ಕೊಬ್ಬರಿ ಖರೀದಿಸಿದರೆ ರೈತರಿಗೆ ಒಳಿತು: ಸಚಿವ ಶಿವಾನಂದ ಪಾಟೀಲ

ಶೂನ್ಯ ವೇಳೆಯಲ್ಲಿ ಶಾಸಕ ಶಿವಲಿಂಗೇಗೌಡ, ಎಚ್.ಡಿ.ರೇವಣ್ಣ ಸೇರಿದಂತೆ ವಿವಿಧ ಶಾಸಕರು ಕೊಬ್ಬರಿ ಪ್ರೊತ್ಸಾಹಧನ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳವ ಬಗ್ಗೆ ಪ್ರಸ್ತಾಪಿಸಿದರು.

ಸಚಿವ ಶಿವಾನಂದ ಪಾಟೀಲ
ಸಚಿವ ಶಿವಾನಂದ ಪಾಟೀಲ

By ETV Bharat Karnataka Team

Published : Dec 6, 2023, 10:55 PM IST

ಸಚಿವ ಶಿವಾನಂದ ಪಾಟೀಲ ಮಾತು

ಬೆಳಗಾವಿ/ಬೆಂಗಳೂರು: ರಾಜ್ಯ ಸರಕಾರ ತೆಂಗು ಬೆಳೆಗಾರರಿಗೆ ಸಹಾಯ ಮಾಡಲು, ಕೇಂದ್ರದ ಬೆಂಬಲ ಬೆಲೆ ಯೋಜನೆಯಡಿ ನೀಡುವ ದರದೊಂದಿಗೆ ಕೊಬ್ಬರಿ ಖರೀದಿಗೆ ಈಗಾಗಲೇ 1,225 ರೂ.ಗಳನ್ನು ಪ್ರೊತ್ಸಾಹಧನ ನೀಡುತ್ತಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದರು.

ಶೂನ್ಯ ವೇಳೆಯಲ್ಲಿ ಶಾಸಕ ಶಿವಲಿಂಗೇಗೌಡ, ಎಚ್.ಡಿ.ರೇವಣ್ಣ ಸೇರಿದಂತೆ ವಿವಿಧ ಶಾಸಕರು ಕೊಬ್ಬರಿ ಖರೀದಿ ಬೆಲೆ ಬಹಳಷ್ಟು ಕಡಿಮೆ ಆಗಿರುವುದರಿಂದ ಸರಕಾರಗಳು ರೈತರ ನೆರವಿಗೆ ಬರಬೇಕೆಂದು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ನಫೇಡ್ ಸಂಸ್ಥೆ ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿ ಕಾರ್ಯವನ್ನು ಸ್ಥಗಿತಗೊಳಿಸಿರುವುದರಿಂದ ರೈತರಿಗೆ ತೊಂದರೆ ಆಗಿದೆ. ಮರು ಆರಂಭಿಸಲು ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ. ರಾಜ್ಯ ಸರಕಾರ ಕೊಬ್ಬರಿ ಖರೀದಿಗೆ ನೀಡಿರುವ ಈಗೀರುವ ಪ್ರೋತ್ಸಾಹಧನ ರೂ.1225 ಗಳೊಂದಿಗೆ ರೂ.225 ಸೇರಿಸಿ ಒಟ್ಟು 1500 ರೂ.ಗಳನ್ನು ನೀಡುತ್ತದೆ. ಕೇಂದ್ರ ಆದಷ್ಟು ಬೇಗ ಖರೀದಿ ಪ್ರಾರಂಭಿಸಿದರೆ ರೈತರಿಗೆ ಒಳಿತಾಗುತ್ತದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಹೆಚ್.ಡಿ.ರೇವಣ್ಣ, ಕೈ ಶಾಸಕ ಷಡಕ್ಷರಿ ಗೆಲ್ಲಬೇಕಾದರೆ ಡಿಕೆ ಶಿವಕುಮಾರ್​ ಚುನಾವಣೆ ವೇಳೆ ನಮ್ಮ ಸರ್ಕಾರ ಬಂದ 24 ತಾಸಿನಲ್ಲಿ ನಾನು ಕೊಬ್ಬರಿಗೆ 15,000 ರೂ. ಕೊಡಿಸುವ ತರ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಅದರಿಂದ ಷಡಕ್ಷರಿ ಗೆದ್ದಿದ್ದಾರೆ. ಕೊಟ್ಟರೆ ಕೊಡಿ ಇಲ್ಲಾಂದ್ರೆ ನಾನು ಚುನಾವಣೆಗೋಸ್ಕರ ಮಾತ್ರ ಹೇಳಿದ್ದೇನೆ ಅಷ್ಟೇ, ನನಗೆ ಈಗ ಆಗಲ್ಲ ಎಂದು ಹೇಳಲಿ ಎಂದು ಸವಾಲು ಹಾಕಿದರು.

ಈ ವೇಳೆ ಕಾಂಗ್ರೆಸ್ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ನಿಮ್ಮ ಮಗ ಸಂಸದರಲ್ಲವೇ?. ಸಂಸತ್​ನಲ್ಲಿ ಮಾತನಾಡಲು ಹೇಳಿ ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಆಗ ಮಧ್ಯಪ್ರವೇಶಿಸಿದ ಹೆಚ್.ಡಿ ಕುಮಾರಸ್ವಾಮಿ, ಒಂದು ಕಾಲದಲ್ಲಿ 28ಕ್ಕೆ 28 ಕಾಂಗ್ರೆಸ್ ಸಂಸದರು ಗೆಲ್ಲುತ್ತಿದ್ದರಲ್ಲ. ಆಗ ಸಂಸತ್​ನಲ್ಲಿ ಕಾಂಗ್ರೆಸ್‌ನವರು ನೀರಾವರಿ ಬಗ್ಗೆ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು. ಅದಕ್ಕೆ ಕಾಂಗ್ರೆಸ್ ಶಾಸಕರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರಿಂದ ಪರಸ್ಪರ ವಾಕ್ಸಮರ ಉಂಟಾಯಿತು.

ಈ ವೇಳೆ ಎದ್ದು ನಿಂತ ಕೈ ಶಾಸಕ ಬಸವರಾಜ ರಾಯರೆಡ್ಡಿ, ಅವರ ಸಮಸ್ಯೆ ಅರ್ಥ ಆಗುತ್ತದೆ. ಕೊಬ್ಬರಿ ವಿಚಾರವನ್ನು 69 ರೂಲ್‌ಗೆ ಪರಿವರ್ತಿಸಿ ಚರ್ಚೆಗೆ ಅವಕಾಶ ಮಾಡಿಕೊಡಿ, ಇಲ್ಲವಾದರೆ ಒಂದು ತಾಸು ಚರ್ಚೆಗೆ ಅವಕಾಶ ಮಾಡಿಕೊಡಿ. ಬರಗಲಾದ ಬಗ್ಗೆ ಮಾತನಾಡಲು ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಬೇಡ ಅಂದರೆ ನಾಳೆಯಿಂದ ನಾನು ಸದನಕ್ಕೆ ಬರುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಶೂನ್ಯ ವೇಳೆಯ ಶೂನ್ಯಯ ಸಾಧನೆ:ಮಾತು ಮುಂದುವರಿಸಿದ ಹೆಚ್.ಡಿ.ರೇವಣ್ಣ, ಗೌರವ ಉಳಿಸಿವುದಾದರೆ ಉಳಿಸಲಿ ಅವರ ಆಶ್ವಾಸನೆ ಉಳಿಸಲಿ. ಇಲ್ಲಾಂದ್ರೆ ಮಾಡುವುದಕ್ಕೆ ಆಗಲ್ಲ ಎಂದು ಹೇಳಲಿ. ಕೇಂದ್ರ ಸರ್ಕಾರವೂ ವಿಫಲವಾಗಿದೆ. ಎಐಸಿಸಿ ಅಧ್ಯಕ್ಷರು ರಾಜ್ಯಸಭೆ ನಾಯಕರು ಅಲ್ಲಿ ಮಾತನಾಡಲಿ. ಏಕೆ ಮಾತನಾಡುತ್ತಿಲ್ಲ ಎಂದು ಆಗ್ರಹಿಸಿದರು.

ಜೆಡಿಎಸ್ ಸದಸ್ಯ ಬಾಲಕೃಷ್ಣ ಮಾತನಾಡಿ, ಕೆಲವರು ಪ್ರತಿಪಕ್ಷ ಸದಸ್ಯರು ಇಲ್ಲಿದ್ದಾಗ ಏನು ಮಾತನಾಡಿದ್ದರು, ಈಗ ಏನು ಮಾತನಾಡುತ್ತಿದ್ದಾರೆ ಎಂಬುದನ್ನು ನೋಡಬೇಕು. ಆವತ್ತು ಆವರ್ತ ನಿಧಿ ಇದೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೊಡುವುದು ವಿಳಂಬವಾದರೆ, ನಾವೇ ಆವರ್ತ ನಿಧಿ ಹಣ ಬಳಸಬೇಕು ಎಂದಿದ್ದರು. ಹೀಗಾಗಿ ರಾಜ್ಯ ಸರ್ಕಾರವೇ 15,000 ರೂ. ಬೆಂಬಲ ಬೆಲೆ ನೀಡಿ ಕೊಬ್ಬರಿ ಏಕೆ ಖರೀದಿ ಮಾಡಬಾರದು ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಶೂನ್ಯ ವೇಳೆ ಕೊಬ್ಬರಿ ಬೆಲೆ ಕುಸಿತ ವಿಚಾರ ಪ್ರಸ್ತಾಪ: ಶಿವಲಿಂಗೇಗೌಡ-ಹೆಚ್ ಡಿ ರೇವಣ್ಣ ವಾಕ್ಸಮರ

ABOUT THE AUTHOR

...view details