ಕರ್ನಾಟಕ

karnataka

ETV Bharat / state

ಕೇಂದ್ರದೊಂದಿಗೆ ನೀರಾವರಿ ಯೋಜನೆ, ಬರ ಚರ್ಚೆಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಸಿದ್ಧ: ಸಿಎಂ - ಕೃಷ್ಣಾ ಮೇಲ್ದಂಡೆ

ಮೇಕೆದಾಟು ಯೋಜನೆಯು ಕುಡಿಯುವ ನೀರು, ವಿದ್ಯುತ್ ಉತ್ಪಾದನೆಯ ಉದ್ದೇಶದಿಂದ ರೂಪಿಸಿರುವ ಯೋಜನೆ. ಅಣೆಕಟ್ಟನ್ನು ಕರ್ನಾಟಕದ ವ್ಯಾಪ್ತಿಯಲ್ಲಿ ನಿರ್ಮಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದರು.

CM Siddaramaiah spoke in the assembly.
ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

By ETV Bharat Karnataka Team

Published : Dec 15, 2023, 6:52 PM IST

Updated : Dec 15, 2023, 7:31 PM IST

ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಬೆಳಗಾವಿ/ಬೆಂಗಳೂರು: ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಮತ್ತು ತಿರುವಳಿಗಳನ್ನು ಪಡೆಯಲು ಸರ್ವ ಪಕ್ಷ ನಿಯೋಗ ಕೊಂಡೊಯ್ಯಲು ಸರ್ಕಾರ ಸಿದ್ಧವಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ತಿರುವಳಿಗಳನ್ನು ಕೊಡಿಸಿದರೆ ತಕ್ಷಣ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ನೀರಾವರಿಗಾಗಿ ಕೃಷ್ಣಾ ಭಾಗ್ಯ ಜಲ ನಿಗಮ 3ನೇ ಹಂತದಲ್ಲಿ 130 ಟಿಎಂಸಿ ನೀರು ಬಳಸಬೇಕು ಎಂಬ ಆದೇಶವಿದ್ದರೂ ಅಫಿಡವಿಟ್ ಹಾಕಿಲ್ಲ. 2ನೇ ಟ್ರಿಬ್ಯುನಲ್ ಬ್ರಿಜೇಶ್ ಕುಮಾರ್ ವರದಿ ಕೊಟ್ಟು 13 ವರ್ಷಗಳಾಯಿತು. ಇಷ್ಟು ವರ್ಷಗಳಿಂದ ಗೆಜೆಟ್ ಅಧಿಸೂಚನೆ ಆಗಿಲ್ಲ. ಇದು ಆಗದೇ ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್​​ಗೆ ಏರಿಸಲಾಗುವುದಿಲ್ಲ. ಈ ಬಗ್ಗೆ ಒತ್ತಾಯಿಸಲು ಸರ್ವ ಪಕ್ಷ ನಿಯೋಗ ಕರೆದೊಯ್ಯಲು ನಾವು ಸಿದ್ದರಿದ್ದೇವೆ. ಆದರೆ ಪ್ರಧಾನಿಗಳು ಭೇಟಿಗೆ ಅವಕಾಶವನ್ನೇ ನೀಡುವುದಿಲ್ಲ ಎಂದು ದೂರಿದರು.

ಮಹದಾಯಿ ಕುಡಿಯುವ ನೀರಿನ ಯೋಜನೆಗೆ ಅರಣ್ಯ ಮತ್ತು ಪರಿಸರದ ಬಗ್ಗೆ ತಿರುವಳಿಯಾಗಬೇಕು. ಅವರು ಕೊಟ್ಟ ತಕ್ಷಣ ನಾವು ಕೆಲಸ ಪ್ರಾರಂಭ ಮಾಡುತ್ತೇವೆ. ಮಹದಾಯಿ, ಕೃಷ್ಣಾ ಮೇಲ್ದಂಡೆಗೂ ಸರ್ವ ಪಕ್ಷ ನಿಯೋಗ ಕರೆದೊಯ್ಯಲು ನಾವು ಸಿದ್ದರಿದ್ದೇವೆ ಎಂದರು.

ಕೃಷ್ಣಾ ಮೇಲ್ದಂಡೆಗೆ ಒಂದು ರೂಪಾಯಿ ಬಿಡುಗಡೆ ಆಗಿಲ್ಲ: ಕೃಷ್ಣಾ ಮೇಲ್ದಂಡೆಗೆ 21 ಕೋಟಿ ರೂ ಪರಿಷ್ಕೃತ ಅಂದಾಜು ಪಟ್ಟಿ. 5300 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದ ಬಜೆಟ್​​ದಲ್ಲಿ ಘೋಷಣೆಯಾಗಿದೆ. ಇವತ್ತಿನವರೆಗೂ ಒಂದು ರೂ ಬಿಡುಗಡೆ ಆಗಿಲ್ಲ. ಮತ್ತೊಂದೆಡೆ ಕೇಂದ್ರ ಹಣಕಾಸು ಮಂತ್ರಿಗಳು ಕರ್ನಾಟಕಕ್ಕೆ ಯಾವುದೇ ಅನುದಾನ ಬಾಕಿ ಇಲ್ಲ ಎನ್ನುತ್ತಾರೆ. ನಾವು ಅಧಿಸೂಚನೆ ಆಗುವವರೆಗೆ ಪುನರ್ವಸತಿ ಮತ್ತು ಪುನಶ್ಚೇತನ ಕಾರ್ಯವನ್ನು ಕೈಗೊಳ್ಳುತ್ತೇವೆ. ನಾವು ಅತಿ, ಅತ್ಯಂತ, ಹಿಂದುಳಿದ ತಾಲೂಕುಗಳನ್ನು ಅಭಿವೃದ್ಧಿ ಮಾಡಲು ಬದ್ಧರಿದ್ದೇವೆ ಎಂದು ಹೇಳಿದರು.

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ 2018 ರಲ್ಲಿ ಸುಪ್ರೀಂ ಕೋರ್ಟ್ ಸಾಮಾನ್ಯ ವರ್ಷಗಳಲ್ಲಿ 177.25 ಟಿಎಂಸಿ ತಮಿಳುನಾಡಿಗೆ ಕೊಡಬೇಕು ಎಂದು ತೀರ್ಪು ನೀಡಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಎರಡೂ ರಾಜ್ಯಗಳು ನೀರು ಹಂಚಿಕೊಳ್ಳಬೇಕು ಎಂದು ತಿಳಿಸಿದೆ. ಮೇಕೆದಾಟು ಯೋಜನೆಯು ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಮಾಡುವ ಸಲುವಾಗಿ ರೂಪಿಸಿರುವ ಯೋಜನೆ. ಅಣೆಕಟ್ಟು, ಬ್ಯಾಲೆನ್ಸಿಂಗ್ ರಿಸರ್ವಾಯರ್ ಕರ್ನಾಟಕದ ವ್ಯಾಪ್ತಿಯಲ್ಲಿ ನಿರ್ಮಿಸಲಾಗುವುದು. ಇದರಿಂದ ತಮಿಳುನಾಡಿಗೆ ಏನೂ ಹಾನಿಯಿಲ್ಲ. ಬದಲಿಗೆ ಅನುಕೂಲವಾಗುತ್ತದೆ.

ತಮಿಳುನಾಡು, ಕೇರಳ, ಆಂಧ್ರದ ಜೊತೆ ಮಾತುಕತೆ ವಿಫಲವಾಗಿ ನ್ಯಾಯಮಂಡಳಿಯು 193 ಟಿಎಂಸಿ ನೀರು ಕೊಡಬೇಕು ಎಂದು ತೀರ್ಪು ನೀಡಿತ್ತು. ನಂತರ 177.25 ಟಿಎಂಸಿಯನ್ನು ತಮಿಳುನಾಡಿಗೆ ಬಿಡಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಸಿಎಂ ವಿವರಿಸಿದರು.

ಉತ್ತರ ಕರ್ನಾಟಕದ ಬಗ್ಗೆ ಸುದೀರ್ಘ ಚರ್ಚೆ: ಉತ್ತರ ಕರ್ನಾಟಕದ ಚರ್ಚೆಯಲ್ಲಿ 42 ಸದಸ್ಯರು ಭಾಗವಹಿಸಿದ್ದು 11 ಗಂಟೆ 4 ನಿಮಿಷಗಳ ಕಾಲ ಮಾತನಾಡಿದ್ದಾರೆ. ರಾಜಕೀಯ ಬೆರೆಸದೆ ರಾಜ್ಯದ ಅಭಿವೃದ್ಧಿ, 7 ಕೋಟಿ ಕನ್ನಡಿಗರ ಬಗ್ಗೆ ಚರ್ಚೆಯಾಗಿದೆ. ರಾಜ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಚರ್ಚೆಯಾಗಿದೆ. ಕಾಂಗ್ರೆಸ್‌ನ 24 ಸದಸ್ಯರು, ಬಿಜೆಪಿಯ 15, ಜನತಾ ದಳದ 2 , ಪಕ್ಷೇತರರು ಒಬ್ಬರು ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಅಭಿವೃದ್ಧಿಗೆ ಸಲಹೆಗಳನ್ನು ಕೊಟ್ಟಿದ್ದಾರೆ. ಅವರೆಲ್ಲರ ಸಲಹೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.

ಅಭಿವೃದ್ಧಿಗೆ ಎಲ್ಲರಲ್ಲೂ ಇಚ್ಛಾಶಕ್ತಿ ಬೇಕು: ಅನೇಕ ಹೋರಾಟಗಾರರ ತ್ಯಾಗ, ಬಲಿದಾನದ ಪ್ರತಿಫಲವಾಗಿ ಕರ್ನಾಟಕ ರಾಜ್ಯ ಏಕೀಕೃತವಾಗಿದೆ. ಅಭಿವೃದ್ಧಿಯ ಹಿನ್ನೆಡೆಯಲ್ಲಿ ರಾಜ್ಯ ಪ್ರತ್ಯೇಕತೆ ಬಗ್ಗೆ ಮಾತನಾಡುವುದು ಅಂತಹ ಮಹನೀಯರಿಗೆ ಅಪಮಾನ ಮಾಡಿದಂತೆ. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಎಲ್ಲರಲ್ಲೂ ಇಚ್ಛಾಶಕ್ತಿ ಬೇಕು. ರಾಜ್ಯ ಸರ್ಕಾರವು ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ರಾಜ್ಯದ ಕನ್ನಡಿಗರು ಏಕೀಕರಣ ಪೂರ್ವದಲ್ಲಿ ವಿವಿಧ ಪ್ರಾಂತಗಳಲ್ಲಿ ಹಂಚಿ ಹೋಗಿದ್ದರು. ಕರ್ನಾಟಕ ಒಂದಾಗಬೇಕು. ಕನ್ನಡಿಗರು ಒಟ್ಟಾಗಬೇಕು ಎಂದು ಬಯಸಿ ಉತ್ತರ, ದಕ್ಷಿಣ ಭಾಗದ ಅನೇಕ ನಾಯಕರು ನಿರಂತರ ಹೋರಾಟ ಮಾಡಿ ರಾಜ್ಯ ಒಗ್ಗೂಡಿಸಿದರು. ಉತ್ತರ ಕರ್ನಾಟಕ ಸೇರಿದಂತೆ ಈ ಭಾಗಗಳು ಅಭಿವೃದ್ಧಿಯಲ್ಲಿ ಹಿಂದುಳಿಯಲು ಅನೇಕ ಐತಿಹಾಸಿಕ ಕಾರಣಗಳಿವೆ ಎಂದು ವಿವರಿಸಿದ ಸಿಎಂ, ಏಕೀಕರಣಕ್ಕಿಂತ ಮುಂಚೆ ವಿವಿಧೆಡೆ ಹಂಚಿಹೋಗಿದ್ದ ಕರ್ನಾಟಕದ ಪ್ರದೇಶಗಳ ಸ್ಥಿತಿಗತಿ ಬಗ್ಗೆ ಸದನದಲ್ಲಿ ವಿವರಿಸಿದರು.

ಕರ್ನಾಟಕದ ಅಭಿವೃದ್ಧಿಗೆ ಪ್ರೊ.ಡಿ.ಎಂ.ನಂಜುಂಡಪ್ಪ ವರದಿ ಸೇರಿದಂತೆ ವಿವಿಧ ಶಿಫಾರಸುಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಸರ್ಕಾರವು ಈ ಭಾಗದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಿದೆ ಎಂದು ಹೇಳಿದ ಮುಖ್ಯಮಂತ್ರಿಗಳು ಅಭಿವೃದ್ಧಿಯ ಅಷ್ಟಸೂತ್ರಗಳನ್ನು ಸಭೆಯಲ್ಲಿ ಪ್ರಕಟಿಸಿದರು.

ಇದನ್ನೂಓದಿ:ಮಧ್ಯಮಾವಧಿ, ದೀರ್ಘಾವಧಿ ಸಾಲದ ಅಸಲು ಕಟ್ಟಿದರೆ ಸಂಪೂರ್ಣ ಬಡ್ಡಿ ಮನ್ನಾ: ಸಿಎಂ ಸಿದ್ದರಾಮಯ್ಯ

Last Updated : Dec 15, 2023, 7:31 PM IST

ABOUT THE AUTHOR

...view details