ಚಿಕ್ಕೋಡಿ:ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾದ ಚಿಕ್ಕೋಡಿಯಲ್ಲಿ ಲೋಕಸಭಾ ಎಲೆಕ್ಷನ್ ಮುಗಿದಿದ್ದು, ಸೋಲು, ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಅಭ್ಯರ್ಥಿಗಳ ಸೋಲು, ಗೆಲುವಿಗೆ ಕಾರಣವೇನು? ಎಂಬುದರ ಡೀಟೇಲ್ಸ್ ಇಲ್ಲಿದೆ..
ಚಿಕ್ಕೋಡಿ ಲೋಕಸಭಾ ಅಖಾಡದಲ್ಲಿ ಒಟ್ಟು 11 ಮಂದಿ ಅಭ್ಯರ್ಥಿಗಳಿದ್ದಾರೆ. ಅದ್ರಲ್ಲೂ ಪ್ರಮುಖವಾಗಿ ಮೈತ್ರಿ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಹಾಗೂ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ ಜೊಲ್ಲೆ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ..
ಚಿಕ್ಕೋಡಿ ಲೋಕಸಭಾ ಗೆಲುವಿನ ಕಿರೀಟ ಯಾರ ಮುಡಿಗೆ..? ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು 4 ಕ್ಷೇತ್ರ ಬಿಜೆಪಿ, 4 ಕ್ಷೇತ್ರ ಕಾಂಗ್ರೆಸ್ ತಮ್ಮದಾಗಿಸಿಕೊಂಡಿವೆ. ಅಲ್ಲದೆ, ಇಬ್ಬರೂ ಅಭ್ಯರ್ಥಿಗಳ ಕುಟುಂಬದಲ್ಲೂ ಒಬ್ಬೊಬ್ಬರು ಶಾಸಕರಿದ್ದಾರೆ. ವಿಶೇಷ ಎಂದ್ರೆ ಇಬ್ಬರು ಎಂಎಲ್ಎ ಒಂದೇ ಗ್ರಾಮದವರಾಗಿದ್ದು, ಬಿಜೆಪಿ ಅಭ್ಯರ್ಥಿ ಜೊಲ್ಲೆ ಗೆಲುವಿಗೆ ಪತ್ನಿ ಶಶಿಕಲಾ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಗೆಲುವಿಗೆ ಪುತ್ರ ಗಣೇಶ್ ಹುಕ್ಕೇರಿ ಹೋರಾಟ ನಡೆಸಿದ್ದಾರೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಅನ್ನೋದು ಕೆಲವರ ವಾದ.. ಆದ್ರೆ, ಈ ಎಲೆಕ್ಷನ್ನಲ್ಲಿ 80.79% ರಷ್ಟು ವೋಟಿಂಗ್ ಆಗಿರೋದ್ರಿಂದ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಅನ್ನೋದು ಹಲವರ ಪ್ರತಿವಾದ.
ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ..!
ಚಿಕ್ಕೋಡಿ ಸದಲಗಾ ಕ್ಷೇತ್ರದಲ್ಲಿ ಸಂಸದ ಪ್ರಕಾಶ್ ಹುಕ್ಕೇರಿ ಹಾಗೂ ಗಣೇಶ್ ಹುಕ್ಕೇರಿ ಸಾಕಷ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ರು. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಲೆ ಹಾಗೂ ಪ್ರಕಾಶ್ ಹುಕ್ಕೇರಿ ವೈಯಕ್ತಿಕ ವರ್ಚಸ್ಸು ಕ್ಷೇತ್ರದಲ್ಲಿ ಇರುವುದರಿಂದ ಕಾಂಗ್ರೆಸ್ ಜಯಭೇರಿ ಬಾರಿಸುತ್ತದೆ ಅಂತಾರೆ ಕೈ ಕಾರ್ಯಕರ್ತರು.
ಮೋದಿಯತ್ತ ಯುವಕರ ಒಲವು..!
ಇನ್ನು,ಪುಲ್ವಾಮಾ, ಬಾಲಾಕೋಟ್ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್ಗೆ ಯುವ ಜನತೆ ಆಕರ್ಷಿತರಾಗಿದ್ದಾರೆ.ಜೊತೆಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಮತಗಳನ್ನು ಸೆಳಿದಿದ್ದು, ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿವೆ. ನರೇಂದ್ರ ಮೋದಿ ಅಲೆ ಮತ್ತು ಅಣ್ಣಾಸಾಹೇಬ್ ಜೊಲ್ಲೆ ಮಾಡಿರುವ ಸಾಮಾಜಿಕ ಕಾರ್ಯಗಳಿಂದ ಬಿಜೆಪಿಗೆ ಮುನ್ನಡೆ ಬರುತ್ತೆ ಎಂಬುದು ಬಿಜೆಪಿ ಲೆಕ್ಕಾಚಾರ.
ಚಿಕ್ಕೋಡಿಯಲ್ಲಿ ಈ ಭಾರಿ ಶೇ 75ಕ್ಕಿಂತ ಹೆಚ್ಚಿನ ಮತದಾನವಾಗಿದೆ. 8,06,052 ಪುರುಷ, 7,73,202 ಮಹಿಳೆಯರು ಸೇರಿ ಒಟ್ಟು 15,86,796 ಮತದಾರರಿದ್ದಾರೆ. ಇದರಲ್ಲಿ ಲಿಂಗಾಯತ - 3.70 ಲಕ್ಷ, ಮುಸ್ಲಿಂ-2.66 ಲಕ್ಷ, ಕುರುಬ- 1.84 ಲಕ್ಷ, ಪ.ಜಾತಿ - 1.58 ಲಕ್ಷ, ಮರಾಠಾ- 1.47 ಲಕ್ಷ, ಜೈನ- 1.35 ಲಕ್ಷ, ಪ.ಪಂಗಡ- 1.02ಲಕ್ಷ, ರಜಪೂತ- 68ಸಾವಿರ, ಬ್ರಾಹ್ಮಣ- 38 ಸಾವಿರ ಮತದಾರರಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತದಾನವಾಗಿರುವುದು ಯಾರಿಗೆ ಲಾಭ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.