ಬೆಳಗಾವಿ:ರಾಜ್ಯದಲ್ಲಿ ನಾಯಕತ್ವ ಬದಲಾಗಿದೆ. ಬಿಎಸ್‍ವೈ ಸರ್ಕಾರದಲ್ಲಿದ್ದ ಸಚಿವ ಸಂಪುಟವೂ ವಿಸರ್ಜನೆ ಆಗಿದೆ. ಗಡಿ ಜಿಲ್ಲೆ ಬೆಳಗಾವಿಯ ಇಬ್ಬರು ನಾಯಕರಿಗೆ ಮುಂದಿನ ವಾರ ರಚನೆಯಾಗಲಿರುವ ನೂತನ ಸಂಪುಟ ರಚನೆ ವೇಳೆ ಕೊಕ್ ನೀಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.
ಬಿಎಸ್‍ವೈ ಸಂಪುಟದಲ್ಲಿ ಸಿಂಹಪಾಲು ಪಡೆದಿದ್ದ ಗಡಿಜಿಲ್ಲೆ ಬೆಳಗಾವಿಯ ಶಾಸಕರು ಬೊಮ್ಮಾಯಿ ಸಂಪುಟ ಸೇರಲು ತೀವ್ರ ಕಸರತ್ತು ಆರಂಭಿಸಿದ್ದಾರೆ. ಯಾವ ನಾಯಕರಿಗೆ ಜಾಕ್‍ಪಾಟ್ ಹೊಡೆಯಲಿದೆ ಅನ್ನೋದೀಗ ಕುತೂಹಲಕ್ಕೆ ಕಾರಣವಾಗಿದೆ.
ಮೊಟ್ಟೆ ಟೆಂಡರ್ ನೀಡಲು ಡೀಲ್ ಮಾಡಿಕೊಂಡ ಆರೋಪ ಎದುರಿಸುತ್ತಿರುವ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಕಾಗವಾಡ ಶಾಸಕ ಹಾಗೂ ಮಾಜಿ ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ ಅವರಿಗೆ ಬೊಮ್ಮಾಯಿ ಸಂಪುಟದಲ್ಲಿ ಅವಕಾಶ ಸಿಗುವುದು ಬಹುತೇಕ ಕಷ್ಟ ಎನ್ನಲಾಗಿದೆ. ಬಿಎಸ್‍ವೈ ಸರ್ಕಾರದಲ್ಲಿ ಏಕೈಕ ಮಹಿಳಾ ಸಚಿವೆ ಎಂಬ ಖ್ಯಾತಿ ಗಳಿಸಿದ್ದ ಜೊಲ್ಲೆ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವ ಹಿನ್ನೆಲೆ ಮಂತ್ರಿಗಿರಿ ಕೈ ತಪ್ಪುವ ಸಂಭವವಿದೆ.
ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಕೂಡ ಬಿಎಸ್‍ವೈ ಸಂಪುಟದಲ್ಲಿ 2 ವರ್ಷ ಮಂತ್ರಿ ಆಗಿದ್ದರು. ಅನಾರೋಗ್ಯ ಹಾಗೂ ವಯಸ್ಸಿನ ಕಾರಣ ಇಲಾಖೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಲು ಪಾಟೀಲ ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಶ್ರೀಮಂತ ಪಾಟೀಲ ಅವರ ಕಾರ್ಯಕ್ಷಮತೆ ಬಿಜೆಪಿ ಹೈಕಮಾಂಡ್‍ಗೆ ತೃಪ್ತಿ ತಂದಿಲ್ಲ ಎನ್ನಲಾಗುತ್ತಿದ್ದು, ಇವರಿಗೂ ಸಚಿವ ಸ್ಥಾನ ಕೈತಪ್ಪುವ ಸಂಭವ ಹೆಚ್ಚಿದೆ.
ಕತ್ತಿ-ಸವದಿ ಕಥೆ ಏನು?
ಬಿಎಸ್‍ವೈ ಸಂಪುಟದಲ್ಲಿ ಅವಕಾಶ ಪಡೆದಿದ್ದ ಜಿಲ್ಲೆಯ ಇನ್ನಿಬ್ಬರು ಹಿರಿಯ ನಾಯಕರಾದ ಉಮೇಶ ಕತ್ತಿ ಹಾಗೂ ಲಕ್ಷ್ಮಣ ಸವದಿ, ಬಸವರಾಜ್ ಬೊಮ್ಮಾಯಿ ಸಂಪುಟ ಸೇರಲು ಕಸರತ್ತು ಆರಂಭಿಸಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಉಮೇಶ್ ಕತ್ತಿ ಸಂಪುಟ ಸೇರಿದ್ದರು. ಹಿರಿತನ ಆಧರಿಸಿ ಉಮೇಶ ಕತ್ತಿ ಅವರನ್ನು ನೂತನ ಸಂಪುಟಕ್ಕೆ ಪರಿಗಣಿಸುವ ಸಾಧ್ಯತೆ ದಟ್ಟವಾಗಿದೆ. ಆದರೆ ಡಿಸಿಎಂ ಸ್ಥಾನವನ್ನೇ ಕಳೆದುಕೊಳ್ಳುವ ಭೀತಿಯಲ್ಲಿರುವ ಲಕ್ಷ್ಮಣ ಸವದಿ ಇದೀಗ ಸಚಿವ ಸ್ಥಾನವನ್ನಾದರೂ ಉಳಿಸಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ.
ಇದಕ್ಕಾಗಿ ಮತ್ತೇ ಆರ್ಎಸ್ಎಸ್ ನಾಯಕರನ್ನು ಭೇಟಿ ಮಾಡುತ್ತಿರುವ ಲಕ್ಷ್ಮಣ ಸವದಿ ಅವರು, ಹೈಕಮಾಂಡ್ ನಾಯಕರ ಮೂಲಕವೂ ಸಂಪುಟ ಸೇರಲು ಲಾಬಿ ಆರಂಭಿಸಿದ್ದಾರೆ. ಇನ್ನು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದು ಉಪಚುನಾವಣೆಯಲ್ಲಿ ಗೆದ್ದಿರುವ ಅಥಣಿ ಶಾಸಕ ಮಹೇಶ ಕುಮಟಳ್ಳಿ, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಕುಡಚಿ ಶಾಸಕ ಪಿ.ರಾಜೀವ್ ಹಾಗೂ ಆನಂದ ಮಾಮನಿ, ದುರ್ಯೋದನ ಐಹೊಳೆ ಕೂಡ ಸಚಿವ ಸ್ಥಾನಕ್ಕೆ ಕಸರತ್ತು ಆರಂಭಿಸಿದ್ದಾರೆ.
ಬಾಲಚಂದ್ರ ಜಾರಕಿಹೊಳಿಗೆ ಸಿಗುತ್ತಾ ಅವಕಾಶ?
ಮೈತ್ರಿ ಸರ್ಕಾರ ಬೀಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾದ ರಮೇಶ್ ಜಾರಕಿಹೊಳಿ ಬಿಎಸ್‍ವೈ ಸಂಪುಟದಲ್ಲಿ ಹಠಕ್ಕೆ ಬಿದ್ದು ಜಲಸಂಪನ್ಮೂಲ ಖಾತೆ ಪಡೆದಿದ್ದರು. ಅಧಿಕಾರ ವಹಿಸಿಕೊಂಡು ಒಂದು ವರ್ಷದ ಹೊತ್ತಿಗೆ ಸಿಡಿ ಪ್ರಕರಣದಲ್ಲಿ ಸಿಲುಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿಡಿ ಪ್ರಕರಣ ಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿದ್ದು, ಜಾರಕಿಹೊಳಿ ಬೊಮ್ಮಾಯಿ ಸಂಪುಟ ಸೇರುವುದು ಡೌಟ್ ಎನ್ನಲಾಗುತ್ತಿದೆ.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೀಗಾಗಿ ಸಹೋದರ ಹಾಗೂ ಬಾಲಚಂದ್ರ ಜಾರಕಿಹೊಳಿಗೆ ಮಂತ್ರಿ ಸ್ಥಾನ ನೀಡಿ ಎಂದು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ರಮೇಶ್ ಮನವಿಗೆ ಹೈಕಮಾಂಡ್ ಸ್ಪಂದಿಸಿದ್ರೆ ಬಾಲಚಂದ್ರ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಆದರೆ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಬಿಟ್ಟು ಮಂತ್ರಿ ಆಗುವ ಆಸಕ್ತಿ ಹೊಂದಿಲ್ಲ ಎನ್ನಲಾಗುತ್ತಿದೆ.