ನಿಪ್ಪಾಣಿ (ಬೆಳಗಾವಿ) :ಒಂದು ಸಲ ಕುಸ್ತಿ ಮೈದಾನಕ್ಕಿಳಿದ ಮೇಲೆ ಏನಾದರೂ ಆಗಲಿ. ನಾವೂ ಕೂಡ ಅಷ್ಟೇ ಗಟ್ಟಿಯಾಗಿದ್ದೇವೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ಪರೋಕ್ಷ ಸವಾಲೆಸೆದರು. ನಿಪ್ಪಾಣಿ ಪಟ್ಟಣದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ಆಯೋಜನೆಗೊಂಡಿದ್ದ ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವೆ, ಚುನಾವಣೆ ಅಂದರೆ ಚುನಾವಣೆನೇ. ಯಾರು, ಎಲ್ಲಿಂದ ಬರುತ್ತಾರೋ ಬರಲಿ. ಒಂದು ಸಲ ಕುಸ್ತಿ ಪಂದ್ಯಾವಳಿಗೆ ಇಳಿದ ಮೇಲೆ ಏನಾದರೂ ಆಗ್ಲಿ, ನಾವು ಗಟ್ಟಿಯಾಗಿಯೇ ಇದ್ದೇವೆ, ಚುನಾವಣೆ ಎದುರಿಸುತ್ತೇವೆ ಎಂದರು. ಇತ್ತೀಚಿಗೆ ಯಮಕನಮರಡಿ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಅವರು ಚುನಾವಣೆ ಸ್ಪರ್ಧಿಸುವ ವಿಚಾರವಾಗಿ ಬೆಂಗಳೂರು, ನಿಪ್ಪಾಣಿ, ಯಮಕಮರಡಿ ಕ್ಷೇತ್ರಕ್ಕೆ ಬರುತ್ತೀರ ಬನ್ನಿ ಎಂದು ಬಹಿರಂಗವಾಗಿ ಸವಾಲು ಹಾಕಿದ್ದರು. ಇದಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಈ ರೀತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಜೊಲ್ಲೆ ಗ್ರೂಪ್ ವತಿಯಿಂದ ಕಳೆದ 32 ವರ್ಷಗಳಿಂದ ಕ್ರೀಡೆ, ಶಿಕ್ಷಣ, ಆರೋಗ್ಯ, ಆಧ್ಯಾತ್ಮಿಕ ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ದೇಶದ ಮೂಲೆ ಮೂಲೆಗಳಿಂದ ಕಬಡ್ಡಿ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಅಷ್ಟೇ ಅಲ್ಲದೇ, ಬಿಎಸ್ಎಫ್ ತಂಡ, ಸೆಂಟ್ರಲ್ ಪೊಲೀಸ್ ತಂಡ ಹೀಗೆ ಪಂದ್ಯಾವಳಿಯಲ್ಲಿ 40 ತಂಡಗಳು ಪಾಲ್ಗೊಂಡಿವೆ. ನಮ್ಮ ದೇಶೀಯ ಆಟ ಉಳಿಸುವುದೇ ಪಂದ್ಯಾವಳಿಯ ಉದ್ದೇಶ ಎಂದರು.