ಕರ್ನಾಟಕ

karnataka

By

Published : Feb 25, 2020, 7:31 PM IST

ETV Bharat / state

ಬೆಳಗಾವಿಗೆ ಸುಸಜ್ಜಿತ ಮೀನು ಮಾರುಕಟ್ಟೆ: ಪ್ರಸ್ತಾವನೆ ಕಳಿಸಲು ಸಚಿವರ ಸೂಚನೆ

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೀನುಗಾರಿಕಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಬೇರೆ ಕಡೆ ಮಂಜೂರಾಗಿರುವ ಕಟ್ಟಡಗಳ ಕೆಲಸ ಆರಂಭಗೊಳ್ಳದಿದ್ದರೆ ಆ ಯೋಜನೆಯಡಿ ಬೆಳಗಾವಿ ನಗರದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಮೀನು ಮಾರುಕಟ್ಟೆ ಸ್ಥಾಪನೆಗೆ ಪ್ರಸ್ತಾವನೆ ಕಳಿಸುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.

Progress Review Meeting of the Department of Fisheries
ಮೀನುಗಾರಿಕಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು

ಬೆಳಗಾವಿ: ಜಿಲ್ಲೆಯ ಎಲ್ಲಾ ಕೆರೆಗಳ ಸಮೀಕ್ಷೆ ನಡೆಸಿ‌ ಮೀನು ಬಿತ್ತನೆ ಹಾಗೂ ಆದಾಯ ಪ್ರಮಾಣ ಸೇರಿದಂತೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸೂಚನೆ‌ ನೀಡಿದ್ರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮೀನುಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ವರ್ಷದ ಮೀನು ಉತ್ಪಾದನೆ ಪ್ರಮಾಣ, ಆದಾಯ ಮತ್ತು ಸರ್ಕಾರದ ಸೌಲಭ್ಯಗಳ ವಿತರಣೆ ಬಗ್ಗೆ ಅಧಿಕಾರಿಗಳು ಸಮರ್ಪಕ ಮಾಹಿತಿಯನ್ನು ಹೊಂದಿರಬೇಕು. ಹೀಗಿದ್ದಾಗ ಮಾತ್ರ ಲಭ್ಯವಿರುವ ಕೆರೆಗಳನ್ನು ಅರ್ಹ ಮೀನುಗಾರ ಕುಟುಂಬಗಳಿಗೆ ಹಂಚಿಕೆ ಮಾಡಲು ಅನುಕೂಲವಾಗುತ್ತದೆ ಎಂದರು.

ಮೀನುಗಾರಿಕಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು

ಸರ್ಕಾರದ ವತಿಯಿಂದ ಬಲೆ ಮತ್ತು ಹರಿಗೋಲು ವಿತರಣೆ ಮಾಡುವಾಗ ಆಯಾ ಕ್ಷೇತ್ರದ ಶಾಸಕರ ಸಮ್ಮುಖದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಚಿವರು ಸೂಚನೆ ನೀಡಿದರು. ಕೆಲಸ ಕಡಿಮೆ ಇರುವ ತಾಲೂಕುಗಳಲ್ಲಿ ಇರುವ ಅಧಿಕಾರಿಗಳು ಇಡೀ ಜಿಲ್ಲೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಸೌಲಭ್ಯಗಳ ಹಂಚಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಶಾಸಕರ ಸಮ್ಮುಖದಲ್ಲಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪ್ರತಿಯೊಬ್ಬ ಅಧಿಕಾರಿಗಳು ವಿಧಾನಸಭಾ ಕ್ಷೇತ್ರದ ಶಾಸಕರನ್ನು ಕಡ್ಡಾಯವಾಗಿ ಭೇಟಿ ಮಾಡಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಬೇಕು. ಸೌಲಭ್ಯ ಹಂಚಿಕೆ ಹಾಗೂ ಗುರಿ ಸಾಧನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಕಂಡುಬಂದರೆ‌ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

220 ಕೆರೆಗಳಲ್ಲಿ ಮೀನು ಅಭಿವೃದ್ಧಿ ಕಾರ್ಯ ನಡೆದಿದ್ದು, ಇದರಲ್ಲಿ 84 ಕೆರೆಗಳಲ್ಲಿ ಇಡೀ ವರ್ಷ ನೀರು ಲಭ್ಯವಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಮೀನಗಾರರ ಸಹಕಾರ ಸಂಘಗಳಿಂದ ಅರ್ಜಿ ಆಹ್ವಾನಿಸಿ ಒಂದು‌ ಸಂಘಕ್ಕೆ ಗರಿಷ್ಠ ಮೂರು‌ ಕೆರೆಗಳನ್ನು ಗುತ್ತಿಗೆ ನೀಡಬಹುದು ಎಂದು ವಿವರಿಸಿದರು.

ಅತಿಕ್ರಮಣ ತೆರವಿಗೆ ಸೂಚನೆ: ಜಿಲ್ಲೆಯ ರಾಯಬಾಗದಲ್ಲಿರುವ ಮೀನುಗಾರಿಕೆ ಇಲಾಖೆಯ 20 ಗುಂಟೆ ಜಾಗವನ್ನು ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಸಭೆಯಲ್ಲಿ ಸಚಿವರ ಎದುರು ಪ್ರಸ್ತಾಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಅತಿಕ್ರಮಣ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಬಗ್ಗೆ‌ ಕೂಲಂಕಶವಾಗಿ ಪರಿಶೀಲಿಸಿ ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳಿಗೆ ತಿಳಿಸಿದರು. ಒಂದು ವೇಳೆ ಅತಿಕ್ರಮಣ ತೆರವುಗೊಳಿಸದಿದ್ದರೆ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಶ್ನಿಸುತ್ತೇನೆ ಎಂದು‌ ಶಾಸಕ ದುರ್ಯೋಧನ ಐಹೊಳೆ ಹೇಳಿದರು. ಇದಕ್ಕೆ ಉತ್ತರಿಸಿದ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ಕಟ್ಟಡ ಇರುವ ಜಾಗ ಮಾತ್ರ ಇಲಾಖೆಯ ಹೆಸರಿನಲ್ಲಿದೆ ಎಂದು ಮಾಹಿತಿ ನೀಡಿದರು.

ಹಿಡಕಲ್ ಜಲಾಶಯದಲ್ಲಿ ಇಲಾಖೆಯ ವತಿಯಿಂದ 9.44 ಲಕ್ಷ ಮೀನು ಮರಿಗಳನ್ನು ಬಿಡಲಾಗಿದೆ. ಮಲಪ್ರಭಾ 4.72 ಲಕ್ಷ ಮರಿಗಳನ್ನು ಬಿಡಲಾಗಿದೆ ಮಾರ್ಕಂಡೇಯ ಜಲಾಶಯದಲ್ಲಿ 1.44 ಲಕ್ಷ ಮರಿಗಳನ್ನು ಬಿಡಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ಎಸ್.ವಿ.ಕುಲಕರ್ಣಿ ತಿಳಿಸಿದರು. ಕೃಷಿ ಹೊಂಡದಲ್ಲಿ ಕೂಡ ಮೀನುಮರಿಗಳನ್ನು ಬಿಡಲು ಸರ್ಕಾರ ನಿರ್ದೇಶನ ನೀಡಿದ್ದು, ಈ ಬಗ್ಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು. ಬೆಳಗಾವಿ ಉತ್ತರ ಹಾಗೂ ದಕ್ಷಿಣ ಮತ ಕ್ಷೇತ್ರಗಳಲ್ಲಿ ಕನಿಷ್ಠ ಎರಡು ಸುಸಜ್ಜಿತ ಮೀನು ಮಾರುಕಟ್ಟೆ ಸ್ಥಾಪಿಸುವ ಅಗತ್ಯವಿದೆ ಎಂದು ಶಾಸಕ ಅನಿಲ್ ಬೆನಕೆ ಹೇಳಿದರು. ಅದೇ ರೀತಿ ಇಲಾಖೆಯ ಮತ್ಸ್ಯ ಮಾರಾಟ ಕೇಂದ್ರ ಆರಂಭಿಸಬೇಕು. ಇದಕ್ಕೆ ಅಗತ್ಯವಿರುವ ಜಾಗ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಬೇರೆ ಕಡೆ ಮಂಜೂರಾಗಿರುವ ಕಟ್ಟಡಗಳು ಇನ್ನೂ ಕೆಲಸ ಆರಂಭಗೊಳ್ಳದಿದ್ದರೆ ಆ ಯೋಜನೆಯಡಿ ಬೆಳಗಾವಿ ನಗರದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಮೀನು ಮಾರುಕಟ್ಟೆ ಸ್ಥಾಪನೆಗೆ ಪ್ರಸ್ತಾವ ಕಳಿಸುವಂತೆ ಸಚಿವ ಪೂಜಾರಿ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಇಲಾಖೆಯ ಅಧಿಕಾರಿಗಳು ಇದುವರೆಗೆ ಶಾಸಕರು ಅಥವಾ ಸಚಿವರನ್ನು ಭೇಟಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕರಾದ ಅನಿಲ್ ಬೆನಕೆ, ದುರ್ಯೋಧನ ಐಹೊಳೆ ಉಪಸ್ಥಿತರಿದ್ದರು.

ABOUT THE AUTHOR

...view details