ಚಿಕ್ಕೋಡಿ:ಜಿಲ್ಲೆಯ ರಾಜಕಾರಣಿಗಳ ಪಕ್ಷಗಳು ಬೇರೆ ಬೇರೆಯಾಗಿದ್ದರೂ ನೆಲೆ, ಜಲ ವಿಷಯದಲ್ಲಿ ನಾವೆಲ್ಲರೂ ಒಂದೇ. ಎಂಇಎಸ್ ಪುಂಡರ ಆಟ ನಡೆಯೋದಿಲ್ಲ. ನಾವ್ಯಾರೂ ಇಲ್ಲಿ ಬಳೆ ಹಾಕಿಕೊಂಡಿಲ್ಲ, ಎಲ್ಲರೂ ಗಂಡಸರಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ್ ಸವದಿ ಹೇಳಿದರು. ಅಥಣಿ ತಾಲೂಕಿನ ನದಿ ಇಂಗಳಗಾಂವ ತೀರ್ಥ ಗ್ರಾಮದಲ್ಲಿ 4.96 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹಲವು ವರ್ಷಗಳಿಂದ ಎಂಇಎಸ್ ಪುಂಡಾಟಿಕೆ ಮುಂದುವರಿಸಿಕೊಂಡು ಬಂದಿದೆ. ಇದೀಗ ಅದು ಸತ್ತ ಹೆಣವಾಗಿದೆ. ಅದನ್ನು ಜೀವಂತಗೊಳಿಸಲು ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ಕೆಲವರು ಪ್ರಯತ್ನ ಪಡುತ್ತಿದ್ದಾರೆ ಎಂದು ಹರಿಹಾಯ್ದರು. ಗಡಿ ವಿಚಾರವಾಗಿ ಉಭಯ ರಾಜ್ಯದಲ್ಲಿ ಗೊಂದಲ ಉದ್ಭವಿಸಿದೆ. ವ್ಯಾಪಾರ-ವಹಿವಾಟು ಮೇಲೆ ಪರಿಣಾಮ ಬೀರುತ್ತಿದೆ. ಮುಖ್ಯಮಂತ್ರಿ ಏಕನಾಥ್ ಶಿಂದೆ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಅಂಥವರನ್ನು ಹದ್ದುಬಸ್ತಿನಲ್ಲಿಡಬೇಕೆಂದು ಮನವಿ ಮಾಡಿದರು.