ಬೆಳಗಾವಿ:ಡ್ರಗ್ ಮುಕ್ತ ಕರ್ನಾಟಕ ಮಾಡಲು ಸರ್ಕಾರ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆ ಮಟ್ಟಹಾಕಲು ಸರ್ಕಾರ ಅಧಿಕಾರಿಗಳಿಗೆ ಸಂಪೂರ್ಣ ಸ್ವಾಯತ್ತತೆ ನೀಡಿದೆ. ಯಾವುದೇ ಒತ್ತಡ ಹಾಗೂ ಬಲಾಢ್ಯರಿದ್ದರೂ ಯಾವುದಕ್ಕೂ ಮಣಿಯದೆ ಗೃಹ ಇಲಾಖೆ ಕೆಲಸ ಮಾಡುತ್ತಿದೆ. ಪ್ರಕರಣ ಸಂಬಂಧ ಗೃಹ ಸಚಿವರು ಸಹ ವಿಶೇಷ ನಿಗಾ ವಹಿಸಿದ್ದಾರೆ. ಯಾರಿಗೂ ಸಂಶಯ ಬೇಡ. ಇದನ್ನು ನಿಗ್ರಹಿಸಲು ಸರ್ಕಾರ ಸಂಪೂರ್ಣ ಕ್ರಮ ಕೈಗೊಳ್ಳುತ್ತದೆ. ಯಾವುದೇ ರಾಜಕಾರಣಿ ಮಕ್ಕಳಿರಲಿ, ಪ್ರಭಾವಿ ವ್ಯಕ್ತಿಗಳಿರಲಿ. ಅವರ ಹೆಡೆಮುರಿ ಕಟ್ಟುವ ಕೆಲಸ ಗೃಹ ಇಲಾಖೆ ಮಾಡುತ್ತಿದೆ ಎಂದರು.
ಹೆಚ್ಡಿಕೆಗೆ ಸವದಿ ಟಾಂಗ್...
ಡ್ರಗ್ಸ್ ಮಾಫಿಯಾ ಹಣದಿಂದ ಸಮ್ಮಿಶ್ರ ಸರ್ಕಾರ ಪತನ ಮಾಡಲಾಯಿತು ಎಂಬ ಹೆಚ್‌ಡಿಕೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕುಣಿಯಲು ಬರದಿದ್ದರೇ ನೆಲ ಡೊಂಕು ಎಂದಂತಾಗಿದೆ. ಇಲ್ಲಿಯವರೆಗೆ ಹೆಚ್‌ಡಿಕೆ ಯಾಕೆ ಬಾಯಿ ಮುಚ್ಚಿಕೊಂಡಿದ್ರು? ಬಾಯಿ ಬಿಡಲು ಒಂದು ವರ್ಷ ಬೇಕಾಯ್ತಾ? ಯಾವುದೋ ಕುಂಟು ನೆಪ ಹೇಳಿ ಅನವಶ್ಯಕವಾಗಿ ಹೆಚ್‌ಡಿಕೆ ಆರೋಪ ಮಾಡ್ತಿದ್ದಾರೆ. ಅವರ ಮಾತು ಕೇಳಿದ್ರೆ ನಗು ಬರುತ್ತೆ. ಅವರು ಸಿಎಂ ಆಗಿದ್ದಾಗ ಡ್ರಗ್ ಮಾಫಿಯಾದಿಂದ ಸರ್ಕಾರ ಬಿದ್ದಿದೆ ಅಂತಿದ್ದಾರೆ. ಹಾಗಾದ್ರೆ ಅವರು ಸಿಎಂ ಆಗಲು ಸಮರ್ಥರಲ್ಲ ಎಂದು ಅವರೇ ಹೇಳಿಕೊಳ್ಳುತ್ತಿದ್ದಾರೆ. ಅವರ ಹತ್ತಿರವೇ ಗೃಹ ಇಲಾಖೆ, ಇಂಟೆಲಿಜೆನ್ಸಿ ಇತ್ತು. ತಿಳಿದುಕೊಳ್ಳಲಾಗಲಿಲ್ವೇ? ಕುಮಾರಸ್ವಾಮಿ ಅಧಿಕಾರ ವೈಫಲ್ಯದಿಂದಲೇ ಸರ್ಕಾರ ಬಿದ್ದಿದೆ. ಇಂತಹ ವಿಷಯಕ್ಕೆ ನಮ್ಮ ಸರ್ಕಾರ ಬಂದಿಲ್ಲ. ಹೆಚ್‌ಡಿಕೆ ಸರ್ಕಾರ ನಡೆಸಲು ಎಡವಿದ್ದರಿಂದ ಅಲ್ಲಿನ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಹೆಚ್ಡಿಕೆಗೆ ಸವದಿ ತಿರುಗೇಟು ನೀಡಿದರು.
ಯಾವ ರಾಗಿಣಿ ಇರಲಿ, ಪಾಗಿಣಿ ಇರಲಿ. ಅದಕ್ಕೂ ನಮಗೂ ಸಂಬಂಧ ಇಲ್ಲ. ಡ್ರಗ್ ಮಾಫಿಯಾ ಆರೋಪದಲ್ಲಿ ರಾಗಿಣಿ ವಿರುದ್ಧ ತನಿಖೆ ನಡೀತಿದೆ. ತಪ್ಪಿತಸ್ಥರಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದರು.
ರಾಗಿಣಿ ಜೊತೆ ಬಿ.ವೈ.ವಿಜಯೇಂದ್ರ ಫೋಟೋ ವೈರಲ್ ವಿಚಾರಕ್ಕೆ ಉತ್ತರಿಸಿದ ಅವರು ನಟ-ನಟಿಯರು ಚುನಾವಣೆಯಲ್ಲಿ ಸ್ವಾಭಾವಿಕವಾಗಿ ಪಕ್ಷಗಳ ಪರ ಪ್ರಚಾರ ಮಾಡ್ತಾರೆ. ಡ್ರಗ್ ಮಾಫಿಯಾದಲ್ಲಿ ತನಿಖೆಗೊಳ್ಳಲ್ಪಟ್ಟ ನಟಿಯರ ಜತೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಜತೆಗೂ ಫೋಟೋಗಳೂ ಇವೆ. ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋಗಳು ಸಹ ಇವೆ. ಅವರು ಡ್ರಗ್ ಮಾಫಿಯಾದಲ್ಲಿದ್ದಾರೆಂದು ಅವರಿಗೂ ಗೊತ್ತಿರಲಿಲ್ಲ, ನಮಗೂ ಗೊತ್ತಿರಲಿಲ್ಲ. ಚಿತ್ರನಟರಿಂದ ಜನರು ಆಕರ್ಷರಾಗ್ತಾರಂತ ಪ್ರಚಾರಕ್ಕೆ ಬಂದಿರ್ತಾರೆ. ಹೀಗಾಗಿ ಬಳಸಿಕೊಂಡಿರುತ್ತೇವೆ ಎಂದು ಸಮರ್ಥನೆ ನೀಡಿದರು.