ಕರ್ನಾಟಕ

karnataka

ETV Bharat / state

ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಕನಸುಗಳನ್ನು ಪೂರ್ಣ ಮಾಡುತ್ತೇವೆ: ಸಂಸದ ಅಣ್ಣಾಸಾಹೇಬ್ ಜೊಲ್ಲೆ - ಅಣ್ಣಾಸಾಹೇಬ್ ಜೊಲ್ಲೆ

ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಆಶ್ರಮಕ್ಕೆ ಅಣ್ಣಾಸಾಹೇಬ್ ಜೊಲ್ಲೆ ಮತ್ತು ಈರಣ್ಣ ಕಡಾಡಿ ಭೇಟಿ ನೀಡಿದರು.

ಸಂಸದ ಅಣ್ಣಾಸಾಬ್ ಜೊಲ್ಲೆ
ಸಂಸದ ಅಣ್ಣಾಸಾಬ್ ಜೊಲ್ಲೆ

By

Published : Jul 16, 2023, 5:06 PM IST

ಜೈನ ಮುನಿಯ ಕನಸುಗಳನ್ನು ಪೂರ್ಣ ಮಾಡುತ್ತೇವೆ- ಸಂಸದ ಜೊಲ್ಲೆ

ಚಿಕ್ಕೋಡಿ (ಬೆಳಗಾವಿ) :ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಆಘಾತ ಉಂಟು ಮಾಡಿದೆ. ಹಿರೇಕೋಡಿ ಎಂಬ ಸಣ್ಣ ಹಳ್ಳಿಯಲ್ಲಿ ಉತ್ತಮ ಆಶ್ರಮ ಕಟ್ಟಿ, ಶಿಕ್ಷಣ ಸಂಸ್ಥೆ ಮಾಡಿದರು. ಮುಂದೆ ಅವರು ಬಿಟ್ಟು ಹೋದ ಕನಸುಗಳನ್ನು ಪೂರ್ಣ ಮಾಡುತ್ತೇವೆ ಎಂದು ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು.

ಇಂದು ಜೈನಮುನಿ ಆಶ್ರಮಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಮಕುಮಾರ ನಂದಿ ಮಹಾರಾಜರು ಬಿಇ ಪದವೀಧರ ಆಗಿದ್ದು, 14 ಭಾಷೆಗಳಲ್ಲಿ ಪರಿಣಿತರಾಗಿದ್ದರು. ಈ ಪರಿಸರದಲ್ಲಿ ಒಳ್ಳೆಯ ಶಿಕ್ಷಣ ಸಂಸ್ಥೆ, ಆಶ್ರಮ ಅಭಿವೃದ್ಧಿ ಮಾಡಿದ್ದಾರೆ. ಈ ಚಿಕ್ಕ ಗ್ರಾಮದಲ್ಲಿ ಶಿಕ್ಷಣ ಕ್ರಾಂತಿ ಮಾಡುವುದಕ್ಕೆ ಶ್ರೀಗಳು ಕನಸು ಕಂಡಿದ್ದರು. ಅವರ ಕನಸನ್ನು ನಾವು ನನಸು ಮಾಡುತ್ತೇವೆ ಎಂದು ತಿಳಿಸಿದರು.

ಕರ್ನಾಟಕ ಪೊಲೀಸರು ಒಳ್ಳೆಯ ಕಾರ್ಯ ಮಾಡಿ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿ ಘಟನೆ ಆಗಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಶ್ರೀಗಳ ಆಸೆಯಂತೆ ಶಿಕ್ಷಣ ಸಂಸ್ಥೆ ಕಟ್ಟಲು ವೈಯಕ್ತಿಕವಾಗಿ, ಪಕ್ಷದ ವತಿಯಿಂದಲೂ ಸಹಾಯ ಮಾಡುತ್ತೇವೆ. ಎಲ್ಲ ಮುನಿಗಳಿಗೂ ಸರ್ಕಾರದಿಂದ ರಕ್ಷಣೆ ಇರಬೇಕು. ಹಾಗು ಪ್ರಕರಣದ ಸತ್ಯಾಂಶ ಹೊರಬರಬೇಕು ಎಂದು ಸಿಬಿಐ ತನಿಖೆಗೆ ಆಗ್ರಹ ಮಾಡುತ್ತೇವೆ ಎಂದರು.

ಇದೆ ವೇಳೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಶ್ರೀಗಳ ಹತ್ಯೆಯಿಂದ ಮಾನವ ಸಮಾಜ ತಲೆತಗ್ಗಿಸುವಂತಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಆದಷ್ಟು ಬೇಗನೆ ಆರೋಪಿತರಿಗೆ ಕಠಿಣ ಶಿಕ್ಷೆ ಆಗಬೇಕು. ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಲು ಬಿಜೆಪಿ ಸತ್ಯಶೋಧನಾ ಸಮಿತಿ ರಚನೆ ಮಾಡಿತ್ತು. ನಾನು ಪಾರ್ಲಿಮೆಂಟರಿ ಕಮಿಟಿ ಬೋರ್ಡ್‌ನಲ್ಲಿ ಇದ್ದಿದ್ದರಿಂದ ಆಗ ಬರಲು ಆಗಿರಲಿಲ್ಲ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರಿಗೆ ಪೂರ್ಣ ಸತ್ಯ ಗೊತ್ತಿದೆಯೋ ಅವರು ಪೊಲೀಸರಿಗೆ ತಿಳಿಸಿ ಎಂದು ಆಶ್ರಮದವರಿಗೂ ಮನವಿ ಮಾಡಿದ್ದೇನೆ. ಕರ್ನಾಟಕ ಪೊಲೀಸರು ದಕ್ಷ ಕಾರ್ಯ ಮಾಡಿ ಆರೋಪಿಗಳ ಹೆಡೆಮುರಿ ಕಟ್ಟುವ ಕೆಲಸ ಮಾಡಿದ್ದಾರೆ. ಆ ಮ‌‌ನಸ್ಥಿತಿ ಹಿಂದಿನ ಷಡ್ಯಂತ್ರಕ್ಕೆ ಯಾವ ವ್ಯಕ್ತಿ ಇದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಯೋಗ್ಯ ತನಿಖೆ ಆಗಬೇಕು. ಆದರಿಂದ ಸಿಬಿಐ ತನಿಖೆಗೆ ವಹಿಸಬೇಕು ಎಂದು ಈರಣ್ಣ ಕಡಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ರೈತಪರ ಯೋಜನೆಯನ್ನು ಕಾಂಗ್ರೆಸ್ ರದ್ದು ಮಾಡುತ್ತಿದೆ :ಬಿಜೆಪಿ ಸರ್ಕಾರ ರೈತಪರ ಯೋಜನೆ ಜಾರಿ ಮಾಡಿದ್ದನ್ನು ರದ್ದು ಪಡಿಸುವ ದಿಕ್ಕಿನಲ್ಲಿ ಕಾಂಗ್ರೆಸ್ ಸರ್ಕಾರ ಸಾಗುತ್ತಿದೆ. ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುವ ವೇಳೆ ಎಪಿಎಂಸಿ ಕಾನೂನು ರದ್ದು ಮಾಡುತ್ತಿದ್ದೇವೆ ಎಂದಿದ್ದರು. ಎಪಿಎಂಸಿ ಕಾನೂನು ಜಾರಿ ಬಳಿಕ 300 ಕೋಟಿ ಆದಾಯ ಕಡಿಮೆ ಆಗಿದೆ. ಅದಕ್ಕೆ ರದ್ದು ಮಾಡುತ್ತೇವೆ ಎಂದು ಹೇಳಿದ್ದರು. ಎಪಿಎಂಸಿ ಕಾಯ್ದೆ ರೈತರಿಗೆ ಲಾಭ ಮಾಡಲು ಮಾಡಿದ್ದು, ಸರ್ಕಾರಕ್ಕೆ ಲಾಭ ಮಾಡಲು ಅಲ್ಲ.

ಕೇವಲ ಎಪಿಎಂಸಿಯನ್ನು ಗಮನ ಇಟ್ಟುಕೊಂಡು ಮಾಡೋದಾದರೇ, ಫ್ರೀ ಬಸ್‌ ಪ್ರಯಾಣಕ್ಕೆ ಸರ್ಕಾರ ವತಿಯಿಂದ ಸಾರಿಗೆ ನಿಗಮಗಳಿಗೆ ದುಡ್ಡು ಕೊಡುತ್ತೀರ. ಅದೇ ರೀತಿ ಎಪಿಎಂಸಿಗಳಿಗೆ ಹಣ ಕೊಡಿ. ಹಾಗೆ ಆನ್‌ಲೈನ್ ಟ್ರೇಡಿಂಗ್ ವ್ಯವಸ್ಥೆ ಮಾಡಿ. ನಿಮಗೆ ದಲ್ಲಾಳಿಗೆ ಲಾಭ ಮಾಡುವ ಉದ್ದೇಶ ಇದೆಯಾ? ಎಲ್ಲಿ ಹೆಚ್ಚು ಬೆಲೆ ಸಿಗುತ್ತೋ ಅಲ್ಲಿ ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡುವ ಕೆಲಸ ಆಗಬೇಕು. ಎಪಿಎಂಸಿ ತಿದ್ದುಪಡಿ ಕಾನೂನು ಮುಂದುವರಿಸಲು ಆಗ್ರಹ ಮಾಡುತ್ತೇನೆ ಎಂದು ಕಡಾಡಿ ಹೇಳಿದರು.

ವಿದ್ಯುತ್ ದರ ಪ್ರತಿ ಯೂನಿಟ್‌‌ಗೆ 70 ಪೈಸೆ ದರ ಹೆಚ್ಚಳ ಆಗಿದೆ. ನೇಕಾರರ ವಿದ್ಯುತ್ ಮಗ್ಗ, ಸಣ್ಣ ಕೈಗಾರಿಕೆಗಳಿಗೆ ತೊಂದರೆ ಆಗಿದೆ. ವಿದ್ಯುತ್ ದರ ಹೆಚ್ಚಳ ಮಾಡಿದ್ದನ್ನು ವಾಪಸ್ ಪಡೆಯಬೇಕು. ರೈತ ವಿದ್ಯಾ ನಿಧಿ, ಗೋಶಾಲೆ, ಕಿಸಾನ್ ಸಮ್ಮಾನ್ ಯೋಜನೆ ರದ್ದು ಮಾಡುತ್ತಿದ್ದೀರಿ. ಇದರ ಬಗ್ಗೆ ಸ್ಪಷ್ಟತೆ ಇಲ್ಲ. ರೈತರ ಕೃಷಿ ಜಮೀನು ಖರೀದಿಸಲು ಬೇರೆಯವರಿಗೆ ಅವಕಾಶ ಇರಲಿಲ್ಲ. ಕೃಷಿ ಮಾಡಲು ಜಮೀನು ಖರೀದಿಸುವವರಿಗೆ ಮಾತ್ರ ಮಾರಾಟ ಮಾಡಲು ಕಾನೂನು ಭೂ ಮಾರಾಟ ತಿದ್ದುಪಡಿ ತರಲಾಗಿತ್ತು.

ಅದನ್ನು ವಾಪಸ್ ಪಡೆಯುವ ಉದ್ದೇಶ ಏನು? ಹೈನುಗಾರಿಕೆಗೆ ಸಾವಿರ ಕೋಟಿ ವೆಚ್ಚದಲ್ಲಿ ಕ್ಷೀರ ಬ್ಯಾಂಕ್ ಮಾಡಬೇಕು ಎಂದು ಯೋಜನೆ ಮಾಡಿದ್ದೆವು. ಬಿಜೆಪಿ ತಂದಂತಹ ಯೋಜನೆಗಳನ್ನು ರದ್ದು ಮಾಡಿ, ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಇದರ ವಿರುದ್ಧ ಬಿಜೆಪಿ ರೈತ ಮೋರ್ಚಾದಿಂದ ಹಂತ ಹಂತವಾಗಿ ಹೋರಾಟ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಈರಣ್ಣ ಕಡಾಡಿ ತಿಳಿಸಿದರು.

ಇದನ್ನೂ ಓದಿ :ಜೈನಮುನಿ ಹತ್ಯೆ ಪ್ರಕರಣ ಇಡೀ ಯತಿಕುಲವೇ ತಲೆಬಾಗುವಷ್ಟು ನೋವಾಗಿದೆ: ಜಯಮೃತ್ಯುಂಜಯ ಶ್ರೀ

ABOUT THE AUTHOR

...view details