ಬೆಳಗಾವಿ: ಮುಂಬೈ-ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಚೆನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಏರ್ಪಡಿಸಲಾಗಿರುವ ಕಿತ್ತೂರು ಉತ್ಸವಕ್ಕೆ ಸಿಎಂ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂಬೈ- ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು - ಕರ್ನಾಟಕ ಎಂದು ಘೋಷಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ರಾಜ್ಯಮಟ್ಟದ ಉತ್ಸವ:
ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವಾಗಿ ಘೋಷಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಿದೆ. ಕೆಲವು ವರ್ಷಗಳ ಹಿಂದೆ ವೀರ ಜ್ಯೋತಿ ಬೆಳಗಾವಿ ಜಿಲ್ಲೆ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಸಂಚರಿಸುತ್ತಿತ್ತು. ಅದೇ ರೀತಿ ಮುಂದಿನ ಉತ್ಸವ ಸಂದರ್ಭದಲ್ಲಿ ವೀರಜ್ಯೋತಿಯು ರಾಜ್ಯಾದ್ಯಂತ ಸಂಚರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವೇದಿಕೆಯ ಮೂಲಕವೇ ಅಧಿಕಾರಿಗಳಿಗೆ ಆದೇಶ ನೀಡಿದರು.
ಚೆನ್ನಮ್ಮ ಎಲ್ಲರಿಗೂ ಪ್ರೇರಣೆ:
ಕಿತ್ತೂರು ಚೆನ್ನಮ್ಮ ಝಾನ್ಸಿ ರಾಣಿಗಿಂತ 40 ವರ್ಷಗಳ ಮುಂದೆಯೇ ಸ್ವಾತಂತ್ರ್ಯಕ್ಕಾಗಿ ಕತ್ತಿ ಝಳಪಿಸಿದಳು. ಈ ಐತಿಹಾಸಿಕ ಸಾಧನೆಯನ್ನು ಜಗತ್ತಿಗೆ ಸಾರುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಪ್ರಥಮ ಮಹಿಳೆ ಎಂಬುದನ್ನು ಸಾಬೀತು ಪಡಿಸಬೇಕಿದೆ. ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಧುಮುಕಿದ ಚೆನ್ನಮ್ಮ ಇಂದಿನ ಯುವ ಸಮುದಾಯ ಹಾಗೂ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ.