ಬೆಳಗಾವಿ:ಸಿಎಂ ಬದಲಾವಣೆ ಬಿಜೆಪಿ ಆಂತರಿಕ ವಿಚಾರ. ಹೀಗಾಗಿ ನಾನು ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಶಾಸಕಿ ಹೆಬ್ಬಾಳ್ಕರ್ ನಗರದ ಪ್ರವಾಸಿ ಮಂದಿರದಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ನೆರೆ ಪ್ರವಾಹ ಸಂಬಂಧ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗಿಯಾಗಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
2019ರಲ್ಲಿ ಆಗಿರುವ ಪ್ರವಾಹದ ಅವಾಂತರದ ಪರಿಹಾರ ಇನ್ನು ಸಿಕ್ಕಿಲ್ಲ. ಇದನ್ನು ಸಿಎಂ ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ತರುವ ಕೆಲಸ ಮಾಡಿದ್ದೇನೆ. ಏಳು ಕಂದಾಯ ವಿಭಾಗದಲ್ಲಿ ಅಂದಾಜು 1,700 ಕೋಟಿ ರೂ. ಹಾನಿ ಆಗಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯನ್ನು ಸುಧಾರಿಸಲು 200 ಕೋಟಿ ರೂ.ಗಳನ್ನು ತುರ್ತಾಗಿ ಕೊಡಬೇಕೆಂದು ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಮೂಲಕ ಮನವಿ ಮಾಡಲಾಗಿದೆ ಎಂದರು.