ಬೆಳಗಾವಿ:ಸಿದ್ದರಾಮಯ್ಯ, ಡಿಕೆಶಿ ಇಬ್ಬರ ಕದನದಲ್ಲಿ ಎಂ. ಬಿ ಪಾಟೀಲ್‌ಗೆ ಚಾನ್ಸ್ ಬರಬಹುದಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್, ಇಬ್ಬರ ಕದನದಾಗ ನಾ ಯಾಕೆ ಬರಲಿ. ನಮಗೂ ಸಾಮರ್ಥ್ಯ ಇದೆ ಎನ್ನುವ ಮೂಲಕ ತಾನು ಸಿಎಂ ಹುದ್ದೆಗೆ ಸಮರ್ಥ ಅಭ್ಯರ್ಥಿ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇಬ್ಬರ ಕದನದಾಗ ಯಾಕಪಾ? ನಮಗೂ ಸಾಮರ್ಥ್ಯ ಇದೆ. ಯಾವಾಗ ಬೇಕು, ಅವಾಗ ನೇರವಾಗಿಯೇ ಬರುತ್ತೇನೆ. ಎಂ. ಬಿ ಪಾಟೀಲ್ ಇಬ್ಬರ ಕದನದಾಗ ಬರುವಂತದ್ದು ಬೇಕಾಗಿಲ್ಲ. ನಾವು ಬರಬೇಕು ಎಂದರೆ ನೇರವಾಗಿಯೇ ಬರುತ್ತೇವೆ. 'ವಿ ಆರ್ ನಾಟ್ ಎ ಸೆಕೆಂಡ್ ಕ್ಲಾಸ್ ಸಿಟಿಜನ್ಸ್' ಎನ್ನುವ ಮೂಲಕ ತಾನು ಸಿಎಂ ಹುದ್ದೆಗೆ ಸಮರ್ಥ ಅಭ್ಯರ್ಥಿ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಪಂಜಾಬ್ ಮಾದರಿಯಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಮುನ್ನ ಸಿಎಂ ಅಭ್ಯರ್ಥಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಡಬಹುದು ಹಾಗೆ, ಅವರು ಮಾಡಿದಾಗ ಮಾತ್ರ ಕರೆಕ್ಟ್ ಆಗುತ್ತದೆ ಎಂದರು. ಸಿಎಂ ಅಭ್ಯರ್ಥಿ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ವಿಚಾರಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಸರ್ವೇ ಸಾಮಾನ್ಯ ಪದ್ಧತಿ ಇದೆ.
ಚುನಾವಣೆ ಬಳಿಕ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ನಿರ್ಣಯ ಮಾಡುತ್ತದೆ. ಕಾಂಗ್ರೆಸ್ ಪಕ್ಷ ಒಂದು ವೇಳೆ ಬಯಸಿದರೆ, ಪಂಜಾಬ್ ರೀತಿ ಯಾರನ್ನು ಪ್ರಾಜೆಕ್ಟ್ ಮಾಡಿದ್ರೆ ಅವರೂ ಅದನ್ನ ಡಿಕ್ಲೇರ್ ಮಾಡ್ತಾರೆ. ಹೈಕಮಾಂಡ್ಗೆ ಕೇಳುವ ಪ್ರಶ್ನೆಯನ್ನ ನನ್ನನ್ನು ಕೇಳಿದ್ರೆ ಹೇಗೆ? ಹೈಕಮಾಂಡ್ ಆ ನಿರ್ಣಯ ತಗೆದುಕೊಳ್ಳಬಹುದು. ತೆಗೆದುಕೊಳ್ಳದೇ ಇರಬಹುದು ಎಂದರು.