ಚಿಕ್ಕೋಡಿ: ಗಡಿ ಜಿಲ್ಲೆಯಾದ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆ ಆಗುತ್ತಿರುವುದರಿಂದ ಇದಿರಂದ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಛಾವಣಿ ಸೋರಲಾರಂಭಿಸಿದ್ದು, ರೋಗಿಗಳಿಗೆ ಸಂಕಷ್ಟ ಎದುರಾಗಿದೆ. ಅದರಲ್ಲೂ ಪಟ್ಟಣದ ಸಮುದಾಯ ಆಸ್ಪತ್ರೆಗೆ ಹೆರಿಗೆಗೆಂದು ಆಗಮಿಸುವ ಗರ್ಭಿಣಿಯರು ತಂಪಾದ ವಾತಾವರಣದಿಂದ ಆಡಳಿತ ಮಂಡಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿತ್ಯ ಒಳ ರೋಗಿಗಳು ಮತ್ತು ಹೊರ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಜೊತೆಗೆ ಇಲ್ಲಿ ಗರ್ಭಿಣಿಯರು ಹೆರಿಗೆಗೆ ಬರುವವರ ಸಂಖ್ಯೆಯೂ ದ್ವಿಗುಣ. ಸದ್ಯ ಮಳೆಗಾಲದಲ್ಲಿ ಬೆಚ್ಚಗೆ ಇರಬೇಕಿದ್ದ ಬಾಣಂತಿ ಮತ್ತು ಶಿಶುಗಳಿಗೆ ಈ ಆಸ್ಪತ್ರೆಯಲ್ಲಿ ಆ ವಾತಾವರಣವಿಲ್ಲವಾಗಿದೆ. ಆಸ್ಪತ್ರೆ ಸೋರುತ್ತಿದ್ದ ಪರಿಣಾಮ ತಂಪಾದ ವಾತಾವರಣ ನಿರ್ಮಾಣವಾಗಿದೆ ಎಂದು ಜನರು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಎರಡನೇ ಮಹಡಿಯಲ್ಲಿ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ವಿಭಾಗ ಇರುವ ಮಹಡಿಯ ಛಾವಣಿ ಸೋರುತ್ತಿದ್ದು, ಬಕೆಟ್, ಬುಟ್ಟಿ ಇಟ್ಟು ನೀರು ಆಸ್ಪತ್ರೆಗ ನುಗ್ಗದಂತೆ ಸಿಬ್ಬಂದಿ ಪರದಾಟ ನಡೆಸಿದ್ದಾರೆ.
ಈ ವ್ಯವಸ್ಥೆ ಕುರಿತು ಸಾಮಾಜಿಕ ಹೋರಾಟಗಾರಾದ ದೇವಮಾಣೆ ಹಿರೇಕೋಡಿ ಮಾತನಾಡಿ, ಈ ಆಸ್ಪತ್ರೆಯಲ್ಲಿನ ಛಾವಣಿ ಸೋರುತ್ತಿದ್ದು ರೋಗಿಗಳಿಗೆ ತುಂಬಾ ಸಮಸ್ಯೆ ಉಂಟಾಗಿದೆ. ಇಲ್ಲಿಯ ಹೆರಿಗೆ ಕಟ್ಟಡದಲ್ಲೂ ನೀರು ಸೋರುತ್ತಿದೆ. ರೋಗಿಗಳು, ಸಿಬ್ಬಂದಿ ಕಾಲು ಜಾರಿ ಬೀಳುವ ಪರಿಸ್ಥಿತಿ ಇದೆ. ಆದ್ಧರಿಂದ ಸರ್ಕಾರ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳು ಜನ ಸಾಮಾನ್ಯರಿಗೆ ಒಳ್ಳೆಯ ಸೇವೆ ಕೊಡುವಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಒತ್ತಾಯ ಮಾಡಿದರು.