ಚಿಕ್ಕೋಡಿ (ಬೆಳಗಾವಿ): ಕೃಷ್ಣಾ ನದಿ ಪಾತ್ರದ ಗ್ರಾಮಗಳ ಜನರ ಗೋಳು ಕೇಳುವವರೇ ಇಲ್ಲದಂತಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಸುರಿದ ಮಳೆಯಿಂದಾಗಿ ಜಮೀನುಗಳಲ್ಲಿ ನಿಂತ ನೀರು ಹೊರಗಡೆ ಹೋಗಲು ಜಾಗವಿಲ್ಲದೆ ಇಲ್ಲಿನ ರೈತರು ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ, ಖೇಮಲಾಪೂರ ಹೀಗೆ ನದಿ ತೀರದ ಹಲವಾರು ಗ್ರಾಮಗಳ ನದಿ ಪಾತ್ರದ ಜಮೀನುಗಳಲ್ಲಿ ನೀರು ನಿಂತ ಪರಿಣಾಮ ಬೆಳೆದ ಬೆಳೆಗಳೆಲ್ಲವೂ ಹಾಳಾಗಿದ್ದು, ಕಳೆದ ನಾಲ್ಕೈದು ತಿಂಗಳಿನಿಂದ ಜಮೀನಿನಲ್ಲಿ ನೀರು ನಿಂತ ಪರಿಣಾಮ ನೀರು ಹಸಿರು ಬಣ್ಣಕ್ಕೆ ತಿರುಗುವುದರ ಜೊತೆಗೆ ಕಪ್ಪೆ ಮಾಸು ಸಹಿತ ಬೆಳೆದಿದೆ.
ಈಗಾಗಲೇ ಜನ ಕೊರೊನಾ ಭಯದಿಂದ ಬೇಸತ್ತಿದ್ದು, ಈ ಜಮೀನಿನಲ್ಲಿ ನಿಂತ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಆತಂಕ ಎದುರಾಗಿದೆ. ಈಗ ಶಾಲಾ-ಕಾಲೇಜಗಳಿಗೆ ರಜೆ ಇದೆ. ಮುಂದಿನ ದಿನಗಳಲ್ಲಿ ಶಾಲೆ-ಕಾಲೇಜುಗಳು ಪ್ರಾರಂಭವಾದರೆ ಮಕ್ಕಳಿಗೆ ಹೋಗಲು ದಾರಿಯಿಲ್ಲ. ಸದ್ಯ ಖೇಮಲಾಪೂರ ಗ್ರಾಮದ ಜಮೀನಿನ ಭಾಗದಲ್ಲಿ 100ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಏನಾದರೂ ರೋಗ ರುಜಿನಗಳು ಬಂದರೆ ಯಾರು ಜವಾಬ್ದಾರಿ ಎನ್ನುತ್ತಾರೆ ಸ್ಥಳೀಯರು.
ಒಂದು ಕಡೆ ರೋಗದ ಭಯವಾದರೆ, ಇನ್ನೊಂದು ಕಡೆ ಬೆಳೆದ ಬೆಳೆ ಕೈಗೆ ಸಿಗುತ್ತಿಲ್ಲ ಎಂದು ರೈತ ಕಂಗಾಲಾಗಿದ್ದಾನೆ. ಒಂದು ಎಕರೆ ತರಕಾರಿ ಬೆಳೆಯಲು 50 ಸಾವಿರ ರೂ. ಖರ್ಚು ಬರುತ್ತದೆ. ಒಂದು ಎಕರೆ ಕಬ್ಬು ಬೆಳೆಯಲು ಒಂದು ಲಕ್ಷದವರೆಗೆ ಖರ್ಚಾಗುತ್ತದೆ. ಸದ್ಯ ಸುಮಾರು 200 ಎಕರೆ ಜಮೀನಿನಲ್ಲಿ ನೀರು ನಿಂತ ಪರಿಣಾಮ ರೈತರ ಬೆಳೆ ಹಾನಿಯಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬತಾಗಿದೆ ರೈತರ ಬಾಳು.
ಜಮೀನುಗಳಲ್ಲಿ ನಿಂತ ನೀರನ್ನು ಹೊರ ಹಾಕಲು ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಬಗ್ಗೆ ಪರಮಾನಂದವಾಡಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಹೇಳಿದರೂ ಏನೂ ಪ್ರಯೋಜನವಾಗಿಲ್ಲವಂತೆ. ಸ್ಥಳಕ್ಕೆ ಬೆಳಗವಿ ಜಿಲ್ಲಾಧಿಕಾರಿಗಳು ಬಂದು ಜಮೀನುಗಳಲ್ಲಿ ನಿಂತ ನೀರು ಹಾಗೂ ಸ್ಥಳೀಯ ಜನರ ತೊಂದರೆಗಳನ್ನು ಆಲಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.