ಬೆಳಗಾವಿ: ಮಹಾನಗರ ಪಾಲಿಕೆಯ ಪ್ರತಿಯೊಂದು ವಾರ್ಡ್‌ಗಳಲ್ಲಿ ರಚನಾತ್ಮಕವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಕ್ಕಾಗಿ 'ನಾಗರಿಕ ವಾರ್ಡ್ ಸಮಿತಿ' ರಚಿಸಬೇಕೆಂಬ ಕಾನೂನಿದೆ. ಆದರೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪಾಲಿಕೆ ಸದಸ್ಯರು ಆಯ್ಕೆಯಾಗಿ 2 ವರ್ಷ ಕಳೆಯುತ್ತಾ ಬಂದರೂ ವಾರ್ಡ್ ಸಮಿತಿ ರಚನೆ ಆಗದೇ ಇರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯ ಆಡಳಿತದಲ್ಲಿ ನಾಗರಿಕರ ಸಹಭಾಗಿತ್ವದೊಂದಿಗೆ ವಾರ್ಡ್‌ಗಳಲ್ಲಿ ಪರಿಣಾಮಕಾರಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ 'ನಾಗರಿಕ ವಾರ್ಡ್ ಸಮಿತಿ' ರಚಿಸಬೇಕು ಎಂಬ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ಸ್ ಕಾಯ್ದೆ ಇದೆ. ಈಗಾಗಲೇ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿ ರಾಜ್ಯದ ಇತರ ಮಹಾನಗರ ಪಾಲಿಕೆಗಳಲ್ಲಿ ನೋಟಿಫಿಕೇಶನ್ ಹೊರಡಿಸಲಾಗಿದ್ದು, ವಾರ್ಡ್ ಸಮಿತಿ ರಚಿಸುವ ಪ್ರಕ್ರಿಯೆ ನಡೆದಿವೆ.
ಆದರೆ, ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ವಾರ್ಡ್ ಸಮಿತಿ ರಚನೆ ನೆನೆಗುದಿಗೆ ಬಿದ್ದಿದೆ. ಪಾಲಿಕೆ ಸದಸ್ಯರು ಆಯ್ಕೆಯಾದ ಬಳಿಕ ವಾರ್ಡ್ ಸಮಿತಿ ರಚಿಸುವಂತೆ ಪಾಲಿಕೆ ಆಯುಕ್ತರಿಗೆ ನಾಗರಿಕರು ಮನವಿ ಸಲ್ಲಿಸಿದ್ದರು. ಮೇಯರ್ ಆಯ್ಕೆ ಬಳಿಕ ಸಮಿತಿ ರಚಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಮೇಯರ್ ಆಯ್ಕೆ ಬಳಿಕ ವಿಧಾನಸಭೆ ಚುನಾವಣೆ ನೆಪ ಹೇಳಿ ಮತ್ತೆ ಮುಂದಕ್ಕೆ ಹಾಕಿದ್ದರು. ಈಗ ನೂತನ ಶಾಸಕರು ಆಯ್ಕೆಯಾದರೂ ವಾರ್ಡ್ ಸಮಿತಿ ರಚಿಸುವ ಪ್ರಕ್ರಿಯೆ ಆರಂಭ ಆಗದೇ ಇರುವುದಕ್ಕೆ ನಾಗರಿಕರು ಮತ್ತಷ್ಟು ಅಸಮಾಧಾನ ಹೊರ ಹಾಕಿದ್ದಾರೆ.
ಏನಿದು ನಾಗರಿಕರ ವಾರ್ಡ್ ಸಮಿತಿ?ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಹಾಗೂ ಸಾರ್ವಜನಿಕರ ಹಣ ದುರ್ಬಳಕೆಯಾಗಬಾರದೆಂಬ ಉದ್ದೇಶದಿಂದ ‘ನಾಗರಿಕರ ವಾರ್ಡ್ ಸಮಿತಿ’ ರಚಿಸಲು ಆದೇಶವಿದೆ. ‘ನಾಗರಿಕರ ವಾರ್ಡ್ ಸಮಿತಿ’ಯಲ್ಲಿ 3 ಮಹಿಳೆಯರು, ಪರಿಶಿಷ್ಟ ಜಾತಿ ಓರ್ವ ವ್ಯಕ್ತಿ, ಪರಿಶಿಷ್ಟ ಪಂಗಡದ ಓರ್ವ ವ್ಯಕ್ತಿ ಹಾಗೂ ನೋಂದಾಯಿತ ಸಂಘ - ಸಂಸ್ಥೆಗಳ ಇಬ್ಬರು ಸದಸ್ಯರು ಸೇರಿ 10 ಜನರಿರುತ್ತಾರೆ. ವಾರ್ಡ್ ಪ್ರತಿನಿಧಿಸುವ ಪಾಲಿಕೆ ಸದಸ್ಯ ಸಮಿತಿ ಕಾರ್ಯದರ್ಶಿಯಾಗಿರುತ್ತಾರೆ. ಮಹಾಪೌರರು ಸಮಿತಿ ಅಧ್ಯಕ್ಷರಾಗಿರುತ್ತಾರೆ.