ಬೆಳಗಾವಿ:ಸಾರಥಿ ನಗರದ ಫಾತಿಮಾ ಮಸೀದಿ ವಿವಾದ ಸಂಬಂಧ ಹಿಂದೂಪರ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಕ್ರಮ ಕೈಗೊಂಡಿದೆ. ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ ಮಸೀದಿಗೆ ಬೀಗ ಹಾಕುವಂತೆ ವಕ್ಫ್ ಬೋರ್ಡ್‌ಗೆ ನೋಟಿಸ್ ನೀಡಿದ್ದರು. ಪಾಲಿಕೆ ಆಯುಕ್ತರು ನೋಟಿಸ್ ನೀಡುತ್ತಿದಂತೆ ವಕ್ಫ್ ಕಮಿಟಿ ಮಸೀದಿಗೆ ಬೀಗ ಜಡಿದಿದೆ. ಅನುಮೋದಿತ ನಕ್ಷೆ ಉಲ್ಲಂಘಿಸಿ ಧಾರ್ಮಿಕ ಕಟ್ಟಡ ಕಟ್ಟುತ್ತಿರುವ ಆರೋಪ ಕೇಳಿ ಬಂದಿತ್ತು. ಕಟ್ಟಡ ಕಾಮಗಾರಿ ಹಾಗೂ ಧಾರ್ಮಿಕ ಚಟುವಟಿಕೆ ತಕ್ಷಣ ನಿಲ್ಲಿಸಲು ಬೆಳಗಾವಿ ಜಿಲ್ಲಾ ವಕ್ಫ್ ಕಾರ್ಯಾಲಯದ ಅಧಿಕಾರಿಗೆ ಮಹಾನಗರ ಪಾಲಿಕೆ ಆಯುಕ್ತರು ನೋಟಿಸ್ ನೀಡಿದ್ದರು. ಮಹಾನಗರ ಪಾಲಿಕೆ ನೋಟಿಸ್ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
2011ರಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ವಾಹನ ಚಾಲಕರ ಸಂಘದಿಂದ ಲೇಔಟ್ ನಿರ್ಮಾಣ ಮಾಡಿ ಮಾರಾಟ ಮಾಡಲಾಗಿತ್ತು. 2013ರಲ್ಲಿ ನಿಂಗಪ್ಪ ದನವಾಡೆ ಎಂಬುವವರು ಪ್ಲಾಟ್ ನ.19 ಖರೀದಿ ಮಾಡಿದ್ದರು. ಇದಾದ ಬಳಿಕ ಅಬ್ದುಲ್ ಅಜೀಜ್ ಕಮದೋಡ್ ದಂಪತಿಗೆ ಮಾರಾಟ ಮಾಡಿದ್ದರು. ನಂತರ ಕಮದೋಡ್ ದಂಪತಿಯಿಂದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಸೊಸೈಟಿಗೆ ದಾನ ಮಾಡಲಾಗಿತ್ತು. ದಾನ ಪಡೆದ ಜಾಗದಲ್ಲಿ ಸೊಸೈಟಿಯಿಂದ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಅನಧಿಕೃತ ಮಸೀದಿ ನಿರ್ಮಾಣ ಆರೋಪ:ಇದೀಗ ವಿವಾದಿತ ಜಾಗ ವಕ್ಫ್ ಬೋರ್ಡ್ ಆಸ್ತಿ ಎಂದು ಮುಸ್ಲಿಂ ಮುಖಂಡರು ಹೇಳುತ್ತಿದ್ಧಾರೆ. ಕಳೆದ ವರ್ಷ ಏಪ್ರಿಲ್ 26ರಂದು ಕಾರಣ ಕೇಳಿ ಪಾಲಿಕೆ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಸೊಸೈಟಿಗೆ ಹಾಗೂ ವಕ್ಫ್ ಬೋರ್ಡ್‌ಗೆ ನೋಟಿಸ್ ಜಾರಿ ಮಾಡಿತ್ತು. ನೋಟಿಸ್ಗೆ ಸ್ಪಂದಿಸದ ಕಾರಣ ಜ.13ರಂದು ವಕ್ಫ್ ಜಿಲ್ಲಾ ಕಾರ್ಯಾಲಯಕ್ಕೆ ಮತ್ತೆ ನೋಟಿಸ್ ಜಾರಿ ಮಾಡಲಾಗಿತ್ತು. ವಸತಿ ಉದ್ದೇಶ ಕಟ್ಟಡದಲ್ಲಿ ಧಾರ್ಮಿಕ ಚಟುವಟಿಕೆ ನಡೆಸುತ್ತಿದ್ದ ಆರೋಪ, ಭೂಬಳಕೆ ಮಾರ್ಗಸೂಚಿ ಹಾಗೂ ಕಟ್ಟಡ ಪರವಾನಿಗೆ ಉಲ್ಲಂಘಿಸಿದ ಆರೋಪ ಹಿನ್ನೆಲೆಯಲ್ಲಿ ಕೂಡಲೇ ಧಾರ್ಮಿಕ ಚಟುವಟಿಕೆ ನಿಲ್ಲಿಸುವಂತೆ ಪಾಲಿಕೆ ನೋಟಿಸ್ ನೀಡಿತ್ತು.
ಕೆಎಸ್‌ಆರ್‌ಪಿ ತುಕಡಿ ನಿಯೋಜನೆ: ಮಸೀದಿ ಮುಂಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಒಂದು ವಾರದ ಹಿಂದಷ್ಟೇ ಹಿಂದೂಪರ ಸಂಘಟನೆ ಹಾಗೂ ಬಿಜೆಪಿ ಸ್ಥಳೀಯ ನಾಯಕರಿಂದ ಡಿಸಿಗೆ ಮನವಿ ವಸತಿ ಉದ್ದೇಶ ಕಟ್ಟಡದಲ್ಲಿ ಧಾರ್ಮಿಕ ಚಟುವಟಿಕೆ ಮಾಡುತ್ತಿದ್ದಾರೆ. ಕೂಡಲೇ ಬಂದ್ ಮಾಡಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ದರು.