ಕರ್ನಾಟಕ

karnataka

ETV Bharat / state

ವಿಟಿಯು 23ನೇ ಘಟಿಕೋತ್ಸವ : ಬಿಎಸ್ಎನ್ಎಲ್ ಅಧಿಕಾರಿ ಪುತ್ರನಿಗೆ 13, ಸ್ಟೇಶನರಿ ಅಂಗಡಿ ಮಾಲೀಕನ ಮಗನಿಗೆ 7, ಪೊಲೀಸ್ ಅಧಿಕಾರಿ ಪುತ್ರನಿಗೆ 7 ಚಿನ್ನದ ಪದಕ - ಈಟಿವಿ ಭಾರತ್ ಕನ್ನಡ ಸುದ್ದಿ

VTU convocation: ವಿಟಿಯು 23ನೇ ಘಟಿಕೋತ್ಸವ ಜರುಗಿದ್ದು, ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅವರ ಅಧ್ಯಕ್ಷತೆಯಲ್ಲಿ ಚಿನ್ನದ ಪದಕ ವಿಜೇತರು ಹಾಗೂ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ವಿಟಿಯು 23ನೇ ಘಟಿಕೋತ್ಸವ
ವಿಟಿಯು 23ನೇ ಘಟಿಕೋತ್ಸವ

By

Published : Aug 1, 2023, 8:00 PM IST

ವಿಟಿಯು 23ನೇ ಘಟಿಕೋತ್ಸವ : ಬಿಎಸ್ಎನ್ಎಲ್ ಅಧಿಕಾರಿ ಪುತ್ರನಿಗೆ 13, ಸ್ಟೇಶನರಿ ಅಂಗಡಿ ಮಾಲೀಕನ ಮಗನಿಗೆ 7, ಪೊಲೀಸ್ ಅಧಿಕಾರಿ ಪುತ್ರನಿಗೆ 7 ಚಿನ್ನ ಪದಕ

ಬೆಳಗಾವಿ :ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಎ ಪಿ ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಮಂಗಳವಾರ 23ನೇ ಘಟಿಕೋತ್ಸವ ಜರುಗಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ‌ ಚಿನ್ನದ ಪದಕ ವಿಜೇತರು ಹಾಗೂ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ ನಿರ್ದೇಶಕ ಪ್ರೊ. ವಿ. ಕಾಮಕೋಟಿ ಅವರು ಘಟಿಕೋತ್ಸವ ಭಾಷಣ ಮಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸನ್ನು ನನಸು ಮಾಡಿಕೊಳ್ಳಲು ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಬೇಕು. ಪದವಿಯ ನಂತರ ವಿದ್ಯಾರ್ಥಿಗಳು ತಮಗೆ ಸಿಕ್ಕಿರುವ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ವೃತ್ತಿಪರ ಬೆಳವಣಿಗೆ ಹೊಂದಬೇಕು. ಉದ್ಯೋಗ ಹುಡುಕುವ ಬದಲಿಗೆ ಉದ್ಯೋಗ ಸೃಷ್ಟಿಸುವ ಮೂಲಕ ಭವಿಷ್ಯದಲ್ಲಿ ದೇಶಕ್ಕೆ ನೀವೆಲ್ಲರೂ ಕೊಡುಗೆ ನೀಡುವ ವ್ಯಕ್ತಿಗಳಾಗಬೇಕು.‌

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ವಿವಿಧ ಮಹತ್ವದ ಸಾಧನೆಗಳನ್ನು ಮಾಡುವುದರ ಮೂಲಕ ವಿಶ್ವದಲ್ಲಿ ತನ್ನದೇಯಾದ ಛಾಪು ಮೂಡಿಸಿದೆ. ಇತರೆ ದೇಶಗಳಿಗಿಂತ ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯ ರಾಷ್ಟ್ರವಾಗಿದೆ. ಹಾಗಾಗಿ ಸಂಶೋಧನೆ ಮತ್ತು ನಾವಿನ್ಯತೆಗಳೆರಡು ಸಮಾಜದ ಬೆಳವಣಿಗೆಗೆ ಮುಖ್ಯವಾಗಿವೆ. ಆದ್ದರಿಂದ ಸಂಶೋಧನಾ ಮನೋಭಾವ ನಿರಂತರವಾಗಿರಲಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, 'ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಈಗಾಗಲೇ ಸಾಕಷ್ಟು ವಿಕಸನ ಹೊಂದಿದೆ. ಸದ್ಯ ದೇಶದ ಆರ್ಥಿಕತೆ ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಆರ್ಥಿಕತೆಯಲ್ಲಿ ದೇಶ 3ನೇ ಸ್ಥಾನಕ್ಕೆ ಏರಲಿದೆ. ಈ ನಿಟ್ಟಿನಲ್ಲಿ ಭವಿಷ್ಯದ ಪ್ರಜೆಗಳ ಪಾಲುದಾರಿಕೆ ಅವಶ್ಯಕವಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಹೊಂದುವ ಮೂಲಕ ಭವಿಷ್ಯದಲ್ಲಿ ಭಾರತ ವಿಶ್ವಗುರು ಸ್ಥಾನ ಅಲಂಕರಿಸಲಿದೆ. 100 ವರ್ಷಗಳ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯಲ್ಲಿ ಖಚಿತವಾಗಿ ಭಾರತ ವಿಶ್ವಗುರು ಸ್ಥಾನದಲ್ಲಿರಲಿದೆ' ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತಿಯಿದ್ದ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್​ ಮಾತನಾಡಿ, ಉದ್ಯೋಗಿಗಳಿಗೆ ಜ್ಞಾನಕ್ಕಿಂತ ಕೌಶಲ ಬಹಳ ಮುಖ್ಯ. ವಿಶ್ವವಿದ್ಯಾಲಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳು ಪಠ್ಯಕ್ರಮದ ಜೊತೆಗೆ ಕೈಗಾರಿಕೆಗಳ ಜೊತೆಗೆ ಸಂಬಂಧ ಬೆಳೆಸುವಂತೆ ವಾತಾವರಣ ಸೃಷ್ಟಿಸಬೇಕು. ಅದು ಶೈಕ್ಷಣಿಕ ಪಠ್ಯಕ್ರಮದ ಭಾಗವಾಗಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಮೂವರಿಗೆ ಗೌರವ ಡಾಕ್ಟರೇಟ್:ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಕಾರ್ಯದರ್ಶಿ ಡಾ. ಎ. ವ್ಹಿ. ಎಸ್. ಮೂರ್ತಿ, ಬೆಂಗಳೂರಿನ ಮೈಸೂರು ಮರ್ಕಂಟೈಲ್ ಕಂಪನಿಯ ಅಧ್ಯಕ್ಷ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಯಿತು. ಆದಿಚುಂಚನಗಿರಿಯ ಪೀಠಾಧಿಪತಿ ನಿರ್ಮಲಾನಂದನಾಥ ಶ್ರೀಗಳು ಅನುಪಸ್ಥಿತರಿದ್ದರು.

ಅತೀ ಹೆಚ್ಚು 13 ಚಿನ್ನದ ಪದಕ ಪಡೆದ ಬೆಂಗಳೂರಿನ ಸರ್. ಎಂ ವಿಶ್ವೇಶ್ವರಯ್ಯ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮದಕಶಿರಾ ಚಿನ್ಮಯ ವಿಕಾಸ ಹಾಗೂ ತಲಾ 7 ಚಿನ್ನದ ಪದಕ ಪಡೆದ ಬೆಂಗಳೂರಿನ ಬಿಐಟಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಭಿಷೇಕ. ಜಿ. ಬೆಂಗಳೂರಿನ ಸರ್ ಎಂವಿಐಟಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಗುಡಿಕಲ್ ಸಾಯಿ ವಂಶಿ, ಬಳ್ಳಾರಿಯ ಬಿಐಟಿಎಂ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಕೆ. ಆರ್ ಸಂಪತ್ ಕುಮಾರ್​ ಸೇರಿದಂತೆ ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳಿಗೆ ಪದಕ ವಿತರಿಸಲಾಯಿತು. ಇದೇ ವೇಳೆ 42,545 ಎಂಜಿನಿಯರಿಂಗ್, 1003 ಬಿಆರ್ಕ್, 584 ಪಿಎಚ್‍ಡಿ ಪದವಿಗಳನ್ನು ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ, ಕುಲಸಚಿವರಾದ ಪ್ರೊ. ಟಿ. ಎನ್. ಶ್ರೀನಿವಾಸ, ಪ್ರೊ. ಬಿ. ಈ. ರಂಗಸ್ವಾಮಿ, ಡೀನ್ ಪ್ರೊ.‌ ಸದಾಶಿವೇಗೌಡ, ಹಣಕಾಸು ಅಧಿಕಾರಿ ಎಂ. ಎ. ಸಪ್ನಾ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಬಿಎಸ್ಎನ್ಎಲ್ ಅಧಿಕಾರಿ ಪುತ್ರನಿಗೆ 13 ಚಿನ್ನ: ಆಂಧ್ರ ಪ್ರದೇಶದ ಅನಂತಪುರದ ಮದಕಶಿರಾ ಚಿನ್ಮಯ ವಿಕಾಸ ಬರೋಬ್ಬರಿ 13 ಚಿನ್ನ ಪಡೆದುಕೊಳ್ಳುವ ಮೂಲಕ ಸಾಧನೆ ಮೆರೆದಿದ್ದಾರೆ. ಈಟಿವಿ ಭಾರತ ಜೊತೆಗೆ ಸಂತಸ ವ್ಯಕ್ತಪಡಿಸಿದ ಮದಕಶಿರಾ, ಇದು ನನ್ನ ಜೀವನದ ಮೊದಲ ಸಾಧನೆಯಾಗಿದ್ದು, ತುಂಬಾ ಹೆಮ್ಮೆ ಎನಿಸುತ್ತಿದೆ. ಮುಂದೆ ಐಎಎಸ್ ಅಧಿಕಾರಿ ಆಗುವ ಕನಸು ಕಂಡಿದ್ದೇನೆ ಎಂದರು.

ಸ್ಟೇಶನರಿ ಅಂಗಡಿ ಮಗನಿಗೆ 7 ಚಿನ್ನ : ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಳಗವಾರ ಗ್ರಾಮದಲ್ಲಿ ಒಂದು ಸಣ್ಣ ಸ್ಟೇಶನರಿ ಅಂಗಡಿ ಇಟ್ಟುಕೊಂಡಿರುವ ಗಣಪತಿ ಅವರ ಪುತ್ರ ಅಭಿಷೇಕ. ಜಿ 7 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಪ್ರತಿನಿತ್ಯ ಬೆಂಗಳೂರಿನ ಕಾಲೇಜಿಗೆ ಬಸ್​ನಲ್ಲೇ ಪ್ರಯಾಣಿಸುತ್ತಿದ್ದ ಅಭಿಷೇಕ ಬಡತನದಲ್ಲೂ ಕಷ್ಟಪಟ್ಟು ಓದಿ ಅತ್ಯುತ್ತಮ ಸಾಧನೆಗೈದಿದ್ದಾರೆ. ಈಟಿವಿ ಭಾರತ್​ ಜೊತೆಗೆ ಮಾತನಾಡಿದ ಅವರು, ಕಷ್ಟಪಟ್ಟು ಓದಿದ್ದಕ್ಕೂ ಸಾರ್ಥಕ ಆಗಿದೆ. ನನ್ನ ಈ ಸಾಧನೆಯಲ್ಲಿ ತಂದೆ-ತಾಯಿ, ಉಪನ್ಯಾಸಕರ ಸಹಕಾರ ತುಂಬಾ ಇದೆ. ಮುಂದೆ ವಿದೇಶದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕು ಎಂದುಕೊಂಡಿದ್ದೇನೆ ಎಂದರು.

ಪೊಲೀಸ್ ಅಧಿಕಾರಿ ಪುತ್ರನಿಗೆ 7 ಚಿನ್ನ:ಬಳ್ಳಾರಿ ಜಿಲ್ಲೆಯ ಪೊಲೀಸ್ ಅಧಿಕಾರಿ ಪುತ್ರ ಕೆ. ಆರ್ ಸಂಪತ್ ಕುಮಾರ್​ 7 ಚಿನ್ನದ ಪದಕ ಗಳಿಸಿದ್ದು, ಮಾಧ್ಯಮಗಳ ಜೊತೆಗೆ ಮಾತನಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ರ‍್ಯಾಂಕ್‌​ ಬರುವ ನಿರೀಕ್ಷೆಯಿತ್ತು. ಆದರೆ 7 ಚಿನ್ನದ ಪದಕ ಬರುತ್ತವೆ ಎಂದುಕೊಂಡಿರಲಿಲ್ಲ. ಮುಂದೆ ಯುಪಿಎಸ್ಸಿ ಪರೀಕ್ಷೆ ಎದುರಿಸುವ ಯೋಜನೆ ಹಾಕಿಕೊಂಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:ಗುಲಬರ್ಗಾ ವಿವಿ 41ನೇ ಘಟಿಕೋತ್ಸವ: 14 ಚಿನ್ನದ ಪದಕ ಪಡೆದ ಗ್ರಾಮೀಣ ಪ್ರತಿಭೆ ರುಕ್ಮಿಣಿ!

ABOUT THE AUTHOR

...view details