ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ಡಿ. 13 ರಿಂದ 24 ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನವನ್ನು ಯಶಸ್ವಿಗೊಳಿಸಲು ಉತ್ತಮ ವಸತಿ, ಸಾರಿಗೆ, ಆಹಾರ, ಶಿಷ್ಟಾಚಾರ ಸಿದ್ಧತೆಗಳನ್ನು ಸರ್ಕಾರ, ಜಿಲ್ಲಾಡಳಿತ ಸಮರ್ಪಕವಾಗಿ ಕೈಗೊಳ್ಳಬೇಕು. ಸದ್ಯಕ್ಕೆ ಕೊರೊನಾ ಬಗ್ಗೆ ಯಾವುದೇ ಆತಂಕಗಳಿಲ್ಲ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಸುವರ್ಣಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಅಧಿವೇಶನದ ಪೂರ್ವಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಧಿವೇಶನಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಬುಲೆಟಿನ್, ಕಾರ್ಯಕ್ರಮ ಪಟ್ಟಿ, ಕಲಾಪಗಳು, ಪ್ರಶ್ನೋತ್ತರಗಳ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಹಿಂದೆ 2018ರ ಡಿಸೆಂಬರ್‌ನಲ್ಲಿ ಇಲ್ಲಿ ಅಧಿವೇಶನ ನಡೆದಿತ್ತು. ಅದರ ನಂತರ ಕೊರೊನಾ ಕಾರಣದಿಂದ ಮೂರುವರ್ಷಗಳ ಬಳಿಕ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿದೆ ಎಂದು ತಿಳಿಸಿದರು.
ಕೊರೊನಾ ನಿಯಂತ್ರಣ, ಅತಿವೃಷ್ಟಿ, ವಿಧಾನಪರಿಷತ್ ಚುನಾವಣೆ ಎಲ್ಲವುಗಳ ಮಧ್ಯೆ ಅಧಿವೇಶನ ಆಯೋಜಿಸುವುದು ಸವಾಲಿನ ಕಾರ್ಯವಾಗಿದೆ. ಸಿದ್ಧತೆಗಳನ್ನು ಸರ್ಕಾರ, ಜಿಲ್ಲಾಡಳಿತ ಹಾಗೂ ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಪರಸ್ಪರ ಸಮನ್ವಯದೊಂದಿಗೆ ವಿಶ್ವಾಸಪೂರ್ಣವಾಗಿ ಆಯೋಜಿಸಬೇಕು. ಎಲ್ಲಾ ಹಂತಗಳಲ್ಲಿ ಜವಾಬ್ದಾರಿಯುತವಾಗಿ ಪರಸ್ಪರ ಸಂವಹನ ಮಾಡಬೇಕು ಎಂದರು.