ಬೆಳಗಾವಿ: ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಮಾಜಿ ಸಚೇತಕ ಮಹಾಂತೇಶ ಕವಟಗಿಮಠ ಮತ್ತು ಮಲಪ್ರಭಾ ಶುಗರ್ಸ್ ಮಾಜಿ ಅಧ್ಯಕ್ಷ ಮೋಹನ ಸಂಬರಗಿ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಹೊರಿಸಿ ಬುಧವಾರ ನಂದಗಡ ಠಾಣೆಗೆ ದೂರು ನೀಡಲಾಗಿದೆ. ಮಂಗಳವಾರ ರಾತ್ರಿ ಖಾನಾಪುರ ತಾಲೂಕಿನ ಹಿರೇಮುನವಳ್ಳಿ ಗ್ರಾಮದಲ್ಲಿ ಲಿಂಗಾಯತ ಸಮಾಜದ ಆಯೋಜಿಸಿ 500ಕ್ಕೂ ಹೆಚ್ಚು ಮುಖಂಡರನ್ನು ಸೇರಿಸಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಾಗಿತ್ತು. ಈ ಸಭೆ ಆಯೋಜನೆ ಮುನ್ನ ಚುನಾವಣಾಧಿಕಾರಿಗಳಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದರು ಎಂದು ಚುನಾವಣೆಯ ನೀತಿ ಸಂಹಿತೆ ಪಾಲನೆಯ ಅಧಿಕಾರಿ ರಾಜೇಂದ್ರ ದೂರು ದಾಖಲಿಸಿದ್ದಾರೆ.
ಸಚಿವೆಗೆ ದಂಡ:ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಅವರನ್ನು ಜಾರ್ಖಂಡ್ನ ಹಜಾರಿಬಾಗ್ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ನ್ಯಾಯಾಲಯವು ಅನ್ನಪೂರ್ಣ ದೇವಿ ಅವರಿಗೆ 200 ರೂಪಾಯಿ ದಂಡ ಕೂಡಾ ವಿಧಿಸಿದೆ. 2019ರ ಮೇ 13ರಂದು ಮತದಾನ ಮಾಡಲು ಅನ್ನಪೂರ್ಣ ದೇವಿ ಪಕ್ಷದ ಚುನಾವಣಾ ಚಿಹ್ನೆ ಧರಿಸಿ ಮತದಾನ ಕೇಂದ್ರಕ್ಕೆ ಆಗಮಿಸಿದ್ದರು ಎಂದು ಜಾರ್ಖಂಡ್ ವಿಕಾಸ್ ಮೋರ್ಚಾ (ಜೆವಿಎಂ) ನಾಯಕ ಮಹೇಶ್ ರಾಮ್ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 130 (ಇ) ಅಡಿಯಲ್ಲಿ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. 11 ಮಂದಿಯ ಸಾಕ್ಷ್ಯ ಒದಗಿಸಲಾಗಿತ್ತು. ಅಂತಿಮ ವಿಚಾರಣೆ ನಡೆಸಿದ ನ್ಯಾಯಾಧೀಶೆ ಮರ್ಯಮ್ ಹೆಂಬ್ರಾಮ್ ಅವರು ಸಚಿವೆಯನ್ನು ದೋಷಿ ಎಂದು ಘೋಷಿಸಿ, ದಂಡ ವಿಧಿಸಿದ್ದಾರೆ. ದಂಡ ಕಟ್ಟದಿದ್ದಲ್ಲಿ ಒಂದು ದಿನ ಸಾದಾ ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದು ತಮ್ಮ ಆದೇಶದಲ್ಲಿ ಎಚ್ಚರಿಸಿದ್ದಾರೆ.