ಚಿಕ್ಕೋಡಿ(ಬೆಳಗಾವಿ): ಹಿರೆಕೋಡಿ ಗ್ರಾಮದ ಜೈನ ಮುನಿ ಹತ್ಯೆ ಹಿಂದೆ ಆ್ಯಂಟಿ ನ್ಯಾಷನಲ್ ಟೆರರಿಸ್ಟ್ ಸಂಘಟನೆ ಕೆಲಸ ಮಾಡುತ್ತಿದೆ. ಈ ಪ್ರಕರಣದ ಸತ್ಯಾಸತ್ಯತೆ ಹೊರ ಬರಬೇಕು ಎಂದರೆ ಸಿಬಿಐ ತನಿಖೆ ಆಗಲೇಬೇಕು ಎಂದು ಅಖಿಲ ಭಾರತ ಸಂತ ಸಮಿತಿ ಅಧ್ಯಕ್ಷ ಹಾಗೂ ಮಂಗಳೂರಿನ ಓಂ ಶ್ರೀ ಮಠದ ಸ್ವಾಮೀಜಿಯಾದ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಆಗ್ರಹಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತದ ಜಿನ್ಯಕ್ಯ ಕಾಮಕುಮಾರ ನಂದಿ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ ಸನಾತನ ಧರ್ಮದಲ್ಲಿ ಗುರುತಿಸಿಕೊಂಡಿರುವ ಸ್ವಾಮೀಜಿಗಳನ್ನು ಹತ್ಯೆ ಮಾಡಲು ಆ್ಯಂಟಿ ನ್ಯಾಷನಲ್ ಟೆರರಿಸ್ಟ್ ಸಂಘಟನೆ ಸಂಚು ರೂಪಿಸುತ್ತಿದೆ. ಜೈನ ಮುನಿ ಹತ್ಯೆ ಪ್ರಕರಣವು ಇಡೀ ಭಾರತ ದೇಶಕ್ಕೆ ದೊಡ್ಡ ದುಃಖವಾಗಿದೆ, ಹಿಂದೂ ಸನಾತನ ಧರ್ಮಕ್ಕೆ ಇದೊಂದು ದೊಡ್ಡ ಆಘಾತವಾಗಿದೆ. ಇದು ಓರ್ವನಿಂದ ಆಗಿರುವ ಘಟನೆ ಅಲ್ಲ, ಹಿಂದೆ ದೊಡ್ಡ ಕೈವಾಡ ಇರುವ ಶಂಕೆ ಇದೆ.
ಸನಾತನ ಧರ್ಮ ಜೈನ ಮಠಗಳು ಮುಂದೆ ಬರಬಾರದು ಎನ್ನು ಉದ್ದೇಶದಿಂದ ಈ ರೀತಿ ಮಾಡಿರಬಹುದು. ನಮ್ಮ ಆತ್ಮೀಯ ದೃಷ್ಟಿಯಿಂದ ಇದು ಗೊತ್ತಾಗುತ್ತಿದೆ. ಪ್ರಕರಣದ ಸತ್ಯಾಸತ್ಯತೆ ಹೊರ ಬರಬೇಕು ಎಂದರೆ ಸಿಬಿಐ ತನಿಖೆ ಆಗಲೇಬೇಕು. ಈಗಾಗಲೇ ಗೃಹ ಸಚಿವ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇವೆ. ಅನಿಲ ಭಾರತ ಸಂತ ಸಮಿತಿಯಿಂದ ರಾಜ್ಯಪಾಲರನ್ನು ಭೇಟಿ ಆಗುತ್ತೇವೆ. ಈ ಹಿಂದೆ ಮಹಾರಾಷ್ಟ್ರದಲ್ಲೂ ಒಬ್ಬ ಸನ್ಯಾಸಿಯನ್ನು ಸಹ ಹೊಡೆದು ಕೊಲ್ಲಲಾಗಿದೆ. ಅಲ್ಲಿ ಅಂದು ಇದ್ದದ್ದು ಇದೆ ಸರ್ಕಾರ, ಇಂದು ಇಲ್ಲಿಯೂ ಸಹ ಇದೆ ಸರ್ಕಾರ ಇದೆ ಎಂದು ಹೆಸರು ಹೇಳದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಶ್ರೀಗಳು ವಾಗ್ದಾಳಿ ನಡೆಸಿದರು.