ಕರ್ನಾಟಕ

karnataka

ETV Bharat / state

ಏಳನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಪ್ರತಿಪಕ್ಷಗಳ ಪಟ್ಟು: ಭರವಸೆ ಹಿನ್ನೆಲೆ ಧರಣಿ ಹಿಂಪಡೆದ ಬಿಜೆಪಿ-ಜೆಡಿಎಸ್​ - ಜೆಡಿಎಸ್ ಸದಸ್ಯರು ಧರಣಿ

ಏಳನೇ ವೇತನ ಆಯೋಗ ಜಾರಿಗೆ ಹಾಗೂ 7 ಲಕ್ಷ ಜನ ಮಾಡುವ ಕೆಲಸವನ್ನು ಈಗ 4 ಲಕ್ಷ ಜನರು ಮಾಡುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ಕಲಾಪಕ್ಕೆ ಆಗಮಿಸಿ ಉತ್ತರಿಸಬೇಕೆಂದು ಆಗ್ರಹಿಸಿ ವಿಧಾನ ಪರಿಷತ್ ನಲ್ಲಿ ಬಿಜೆಪಿ, ಜೆಡಿಎಸ್ ಸದಸ್ಯರು ಧರಣಿ ಕೈಗೊಂಡರು.

Vidhan Parishad
ವಿಧಾನ ಪರಿಷತ್

By ETV Bharat Karnataka Team

Published : Dec 6, 2023, 3:56 PM IST

ಬೆಳಗಾವಿ/ಬೆಂಗಳೂರು: ಸರ್ಕಾರ ಭರವಸೆ ನೀಡಿದ್ದರಿಂದ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಅವರ ಸೂಚನೆ ಮೇರೆಗೆ ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯರು ಕೈಗೊಂಡಿದ್ದ ಧರಣಿಯನ್ನು ಕೈಬಿಟ್ಟರು. ಮತ್ತೊಂದೆಡೆ ಸಚಿವ ಜಮೀರ್ ಅಹಮದ್ ತೆಲಂಗಾಣದಲ್ಲಿ ನೀಡಿದ್ದ ಹೇಳಿಕೆ ಪ್ರಸ್ತಾಪವನ್ನು ಸದನದಲ್ಲಿ ಚರ್ಚೆಯ ಬದಲು ಸಭಾಪತಿಗಳ ಕೊಠಡಿಯಲ್ಲಿ ಚರ್ಚೆ ನಡೆಸಲು ನಿರ್ಧರಿಸಲಾಯಿತು.

ಸಿಎಂ ಉತ್ತರಕ್ಕೆ ಪಟ್ಟು: ಪ್ರತಿಪಕ್ಷಗಳ ಧರಣಿಯಿಂದ ಮುಂದೂಡಿಕೆಯಾಗಿದ್ದ ವಿಧಾನ ಪರಿಷತ್ ಸದನ ಪುನಾರಂಭ ಆಗುತ್ತಿದ್ದಂತೆ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಮಾತನಾಡಿ, ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ನಮ್ಮ ವಿರುದ್ಧ ಬ್ಲಾಕ್ ಮೇಲ್ ಮಾಡುತ್ತಿದ್ದೇವೆ ಎನ್ನುವ ಆರೋಪ ಮಾಡಿದ್ದು, ಆದರೆ ನಾವು ಬ್ಲಾಕ್ ಮೇಲ್ ಮಾಡುತ್ತಿಲ್ಲ. ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೇವೆ. ಮಾಧ್ಯಮದವರು ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಸರ್ಕಾರಿ ಹುದ್ದೆಗಳು ಖಾಲಿ ಇವೆ ಅಂತ ತೋರಿಸುತ್ತಿದ್ದಾರೆ. 7 ಲಕ್ಷ ಜನ ಮಾಡಬೇಕಾದ ಕೆಲಸವನ್ನು ಈಗ 4 ಲಕ್ಷ ಜನರು ಮಾಡುತ್ತಿದ್ದಾರೆ. ಹಾಗಾಗಿ ಈ ಕುರಿತು ಮುಖ್ಯಮಂತ್ರಿಗಳು ಕಲಾಪಕ್ಕೆ ಆಗಮಿಸಿ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದಲ್ಲಿ ಒಂದು ಕೋಟಿ ಹುದ್ದೆ ಖಾಲಿ: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್, ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸಿರೋದು ಇವರು ಕಳೆದ ಐದು ವರ್ಷದಿಂದ ಏನು ಕತ್ತೆ ಕಾಯಿತಾ ಇದ್ರಾ? ಯಾಕೆ ಏಳನೇ ವೇತನ ಆಯೋಗ ಜಾರಿ ಮಾಡಲಿಲ್ಲ, ಕೇಂದ್ರ ಸರ್ಕಾರದಲ್ಲಿ ಒಂದು ಕೋಟಿ ಹುದ್ದೆ ಖಾಲಿ ಇವೆ ಗೊತ್ತಾ ಎಂದು ಪ್ರಶ್ನಿಸಿದರು.

ವೆಂಕಟೇಶ್ ಮಾತಿಗೆ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಅಸಮಧಾನ ವ್ಯಕ್ತಪಡಿಸಿದರು, ಕತ್ತೆ ಕಾಯುವ ಕೆಲಸ ಸದನದಲ್ಲಿ ಮಾಡಲ್ಲ, ನಾವು ಇಲ್ಲಿ ಕತ್ತೆ ಕಾಯೋಕೆ ಬಂದಿಲ್ಲ. ಜ್ವಲಂತ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇವೆ. ಮುಖ್ಯಮಂತ್ರಿಗಳು ಸದನಕ್ಕೆ ಬಂದು ಉತ್ತರ ಕೊಡಬೇಕು, ಅಲ್ಲಿಯವರೆಗೂ ಧರಣಿ ವಾಪಸ್​ ಪಡೆಯಲ್ಲ ಎಂದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಜೆಡಿಎಸ್ ನಾಯಕ ಭೋಜೆಗೌಡ, ಆಡಳಿತ ಪಕ್ಷದವರು ಈ ರೀತಿ ಮಾತನಾಡೋದು ಸರಿಯಲ್ಲ, ಕತ್ತೆಗಿರುವ ಗೌರವವನ್ನು ಅವರು ಹಾಳು ಮಾಡಿದ್ದಾರೆ. ಕತ್ತೆಯ ಗುಣಗಳನ್ನ ಬೆಳೆಸಿಕೊಳ್ಳಬೇಕು ಟೀಕಿಸಿದರು.

ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ಮಾತಿನ ಚಕಮಕಿ ನಡುವೆ ಸರ್ಕಾರದ ಪರವಾಗಿ ಸ್ಪಷ್ಟೀಕರಣ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಸುಗಮ ಕಲಾಪಕ್ಕೆ ಅನುವು ಮಾಡಿಕೊಡಬೇಕು, ಸಿಎಂ ಬೆಂಗಳೂರಿನ ಕಾರ್ಯಕ್ರಮದಲ್ಲಿದ್ದು, ಅವರು ಬಂದ ಕೂಡಲೇ ಗಮನಕ್ಕೆ ತರುತ್ತೇವೆ ಎಂದರು.

ಪ್ರತಿಪಕ್ಷಗಳ ವಿರುದ್ಧ ಸಭಾಪತಿ ಗರಂ: ಆದರೆ ಇದಕ್ಕೆ ಬಿಜೆಪಿ ಜೆಡಿಎಸ್ ಸದಸ್ಯರು ಒಪ್ಪದೇ ಸದನದಲ್ಲಿ ಗದ್ದಲವೆಬ್ಬಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ ಸದನದ ಕಲಾಪವನ್ನು ನಡೆಸಲು ಬಿಡಿ, ಇದೇ ರೀತಿ ಆದರೆ ಸದನವನ್ನು ನಾವು ಮುಂದೂಡುತ್ತೇವೆ. ಏನೂ ಹುಡುಗಾಟಿಕೆ ಮಾಡಿಕೊಂಡಿದ್ದೀರಾ? ಎಂದು ಪ್ರತಿಪಕ್ಷಗಳ ವಿರುದ್ಧ ಸಭಾಪತಿ ಗರಂ ಆದರು.

ಈಗ ಸರ್ಕಾರದ ಪರ ಸಚಿವರು ಮಾತನಾಡಿದ್ದಾರೆ, ಸಿಎಂ ಬಂದ ಮೇಲೆ ಉತ್ತರ ಕೊಡಿಸ್ತಿನಿ ಅಂತ ಹೇಳ್ತಾಯಿದ್ದಾರೆ. ನಾನು ಕೂಡ ಸಿಎಂ ಜೊತೆಗೆ ಈ ವಿಚಾರವನ್ನು ಮಾತನಾಡುತ್ತೇನೆ ಎಂದುರು. ಸಭಾಪತಿಗಳ ಈ ಭರವಸೆಗೆ ಒಪ್ಪಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ಕೈ ಬಿಟ್ಟರು.

ಜಮೀರ್ ಅಹಮದ್​​ ಗೈರು ಚರ್ಚೆ: ಇಂದಿನ ಕಲಾಪಕ್ಕೆ ಹಾಜರಾತಿಯಿಂದ ವಿನಾಯಿತಿ ಕೋರಿ ಕಳಿಸಿದ್ದ ಪತ್ರದ ಮಾಹಿತಿಯನ್ನು ಸದನಕ್ಕೆ ನೀಡಿದ ಸಭಾಪತಿ ಬಸವರಾಜ ಹೊರಟ್ಟಿ, ಸ್ವಲ್ಪ ಜಮೀರ್ ಅಹಮದ್​ಗೆ ಮುಖ ತೋರಿಸಲು ಹೇಳಿ ಎಂದು ಸಭಾನಾಯಕರಿಗೆ ಸೂಚನೆ ನೀಡಿದರು. ಜಮೀರ್ ಅಹಮದ್ ಬರ್ತಾನೇ ಇಲ್ಲ ಎಲ್ಲಿ ಎಂದು ಕೇಳಿದರು.

ಜಮೀರ್ ಹೆಸರು ಪ್ರಸ್ತಾಪ ಆಗುತ್ತಿದ್ದಂತೆ ಬಿಜೆಪಿ ಸದಸ್ಯರು ಗದ್ದಲ ಆರಂಭಿಸಿದರು. ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸ್ಪೀಕರ್ ಸ್ಥಾನದ ಮೇಲೆ ಜಮೀರ್ ಅಹಮದ್​​ಗೆ ವಿಶ್ವಾಸ ಇಲ್ಲ. ಸ್ಪೀಕರ್ ಸ್ಥಾನಕ್ಕೆ ಧರ್ಮದ ಲೇಪನ ಮಾಡಿ ಮಾತನಾಡಿದ್ದಾರೆ, ಸ್ಪೀಕರ್ ಹಾಗೂ ಸಭಾಪತಿ ಸ್ಥಾನಕ್ಕೆ ಗೌರವ ಇಲ್ಲ ಅಂತ ಅವರು ಬಂದಿಲ್ವಾ? ಸ್ಪೀಕರ್ ಸ್ಥಾನಕ್ಕೆ ಗೌರವ ನೀಡದೇ ಅಪಮಾನ ಮಾಡಿದರೆ ಅದಕ್ಕಿಂತ ದೊಡ್ಡ ದುರಂತ ಇಲ್ಲ, ತೆಲಂಗಾಣ ಚುನಾವಣೆಯಲ್ಲಿ ಮಾತನಾಡಿದ್ದು ಗೊತ್ತಿಲ್ವಾ? ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಸಭಾನಾಯಕ ಬೋಸರಾಜ್, ಸಚಿವ ಜಮೀರ್ ಅಹಮದ್ ವೈಯಕ್ತಿಕ ಕೆಲಸಕ್ಕೆ ಹೋಗಿದ್ದಾರೆ ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಭಾಪತಿ ಹೊರಟ್ಟಿ, ಈ ರೀತಿ ಪದೇ ಪದೆ ಗೈರಾಗುವುದು ಸರಿಯಲ್ಲ ಎಂದರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ನಾರಾಯಣಸ್ವಾಮಿ, ಸರ್ಕಾರಕ್ಕೆ ಸಭಾಪತಿ ಅವರು ಚಾಟಿ ಬೀಸಬೇಕು, ಮುಖ ತೋರಿಸಿ ಅಂತ ಮಾತ್ರ ಹೇಳಿದರೆ ಹೇಗೆ? ಎಂದರು. ನಾನು ಸೂಕ್ಷ್ಮವಾಗಿ ಹೇಳಿದ್ದೇನೆ, ಎಲ್ಲರೂ ಅರ್ಥ ಮಾಡಿಕೊಳ್ಳಿ ಎಂದು ಹೊರಟ್ಟಿ ಸೂಚ್ಯವಾಗಿ ಸರ್ಕಾರಕ್ಕೆ ತಿಳಿ ಹೇಳಿದರು.

ಈ ವೇಳೆ ಮಧ್ಯ ಪ್ರವೇಶ ಮಾಡಿದ ಸಚಿವ ಕೃಷ್ಣ ಬೈರೇಗೌಡ, ಸಾಮಾನ್ಯವಾಗಿ ಸಚಿವರು ಗೈರು ಹಾಜರಾಗಲು ಅನುಮತಿ ಬೇಕಿಲ್ಲ, ನಿಯಮಗಳ ಪ್ರಕಾರ ಅದರ ಅಗತ್ಯವಿಲ್ಲ. ಹೇಳುವ ಅವಶ್ಯಕತೆ ನನಗೂ ಇರಲಿಲ್ಲ, ವಿಷಯ ತಿಳಿದುಕೊಂಡು ಪೂಜಾರಿಯವರು ಮಾತನಾಡಲಿ ಎಂದರು.

ಸಚಿವರು ಗೈರಾಗಲು ಸಭಾಪತಿ ಅನುಮತಿ ಪಡೆಯಬೇಕು: ಕೃಷ್ಣ ಬೈರೇಗೌಡರ ಹೇಳಿಕೆ ತಳ್ಳಿಹಾಕಿದ ಸಭಾಪತಿ ಹೊರಟ್ಟಿ, ಸಚಿವರು ಗೈರಾಗುವುದಕ್ಕೆ ಸಭಾಪತಿ ಅನುಮತಿ ಪಡೆದುಕೊಳ್ಳಬೇಕು, ಜಮೀರ್ ಅನುಮತಿ ಪಡೆದುಕೊಂಡಿದ್ದಾರೆ, ಅವರ ಕಾರಣಗಳು ನನಗೆ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಭಾಪತಿ ಹೇಳಿಕೆಗೆ ಸಮಾಧಾನಗೊಳ್ಳದ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಪೀಠ ಯಾವತ್ತೂ ನಮ್ಮ ರಕ್ಷಣೆಗೆ ಬರಬೇಕು. ಕ್ಯಾಬಿನೆಟ್ ದರ್ಜೆಯ ಮಂತ್ರಿ ಪೀಠಕ್ಕೆ ಅವಮಾನ ಆಗುವಂತೆ ಮಾತನಾಡಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡಲು ನಮಗೆ ಅವಕಾಶ ನೀಡಬೇಕು ಎಂದರು.

ಇದಕ್ಕೆ ಸ್ಪಂದಿಸಿದ ಸಭಾಪತಿ ಬಸವರಾಜ ಹೊರಟ್ಟಿ ನಮ್ಮ ಸದನಕ್ಕೆ ಜಮೀರ್ ವಿಷಯ ಸಂಬಂಧ ಇಲ್ಲ. ಹಾಗಾಗಿ ನನ್ನ ಚೇಂಬರ್ ನಲ್ಲಿ ಕುಳಿತು ಮಾತನಾಡೋಣ ಎಂದು ಜಮೀರ್ ವಿಷಯದ ಚರ್ಚೆಗೆ ತೆರೆ ಎಳೆದರು.

ಇದನ್ನೂಓದಿ:ಬೆಳೆಹಾನಿಗೆ 2 ಸಾವಿರ ರೂ.ಗಳ ಮೊದಲ ಕಂತು ಮುಂದಿನ ವಾರ ಪಾವತಿ: ಕೃಷ್ಣ ಬೈರೇಗೌಡ

ABOUT THE AUTHOR

...view details