ಬೆಳಗಾವಿ/ಬೆಂಗಳೂರು: ನೈಸ್ ಸಂಸ್ಥೆ ಬಳಿ ಇರುವ 554 ಎಕರೆ ಹೆಚ್ಚುವರಿ ಜಮೀನನ್ನು ಆದಷ್ಟು ಬೇಗ ಸರ್ಕಾರ ವಾಪಸು ಪಡೆಯಲಿದೆ. ಈ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ನೈಸ್ ಸಂಸ್ಥೆಯಿಂದ ಹೆಚ್ಚುವರಿ ಜಮೀನು ವಾಪಸ್ ಪಡೆಯುವ ವಿಚಾರದ ಕುರಿತು ಬಿಜೆಪಿ ಸದಸ್ಯ ತುಳಸಿಮುನಿ ರಾಜುಗೌಡ ಅವರು, ನೈಸ್ ಕಂಪನಿಗೆ ಹೆಚ್ಚುವರಿ ಭೂಮಿ ನೀಡಲಾಗಿದೆ. ಇದುವರೆಗೆ ಹೆಚ್ಚುವರಿ ಭೂಮಿಯನ್ನು ಸರ್ಕಾರ ವಾಪಸ್ ಪಡೆದಿಲ್ಲ. 554 ಎಕರೆ ಹೆಚ್ಚುವರಿ ಭೂಮಿ ನೀಡಿರುವ ಬಗ್ಗೆ ಸುಪ್ರಿಂಕೋರ್ಟ್ ಗೆ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ಆದರೆ ಒಂದೂವರೆ ವರ್ಷದಿಂದಲೂ ಹೆಚ್ಚುವರಿ ಜಮೀನು ವಾಪಸ್ ಪಡೆದಿಲ್ಲ. ಅಧಿಕಾರಿಗಳ ಬಳಿ ನಾವು ಕೇಳಿದ್ದಕ್ಕೆ ಯಾವುದೇ ಮಾಹಿತಿ ಇಲ್ಲ. ನೂರಾರು ಜನ ರೈತರಿಗೆ ಪರಿಹಾರವನ್ನೂ ಕೊಟ್ಟಿಲ್ಲ. ರೈತರು ಸತ್ತರೆ ಅವರ ಹೆಣ ಹೂಳುವುದಕ್ಕೂ ಅಧಿಕಾರಿಗಳು ಬಿಡ್ತಿಲ್ಲ, ಲಕ್ಷ ರೂಪಾಯಿ ಇದ್ದ ಭೂಮಿಯ ಬೆಲೆ ಇದೀಗ ಕೋಟಿ ಆಗಿದೆ. ರೈತರಿಗೆ ಸಂಬಂಧಪಟ್ಟ ಜಮೀನು ಇದುವರೆಗೂ ಸರ್ವೆ ಆಗಿಲ್ಲ ಎಂದು ಸರ್ಕಾರದ ವಿರುದ್ಧ ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಶರಣಬಸಪ್ಪ ದರ್ಶನಾಪುರ, ನೈಸ್ ಸಂಸ್ಥೆ 554 ಎಕರೆ ಜಮೀನನ್ನು ವಾಪಸ್ ಕೊಡಬೇಕಿದೆ. ಅವರು ಹೇಳುತ್ತಿರುವ ಸರ್ವೇ ನಂಬರ್ ಹಾಗೂ ದಾಖಲೆ ಇಟ್ಟಿರುವ ಸರ್ವೆ ನಂಬರ್ ಗೂ ವ್ಯತ್ಯಾಸ ಇದೆ. ಅವರಿಗೆ ಕೊಟ್ಟ ಜಾಗ ಅಂದರೆ ನಾವು ಸೂಚಿಸಿದ ಜಾಗ ವಾಪಸ್ ಬೇಕು. ಆದಷ್ಟು ಬೇಗ ಆ ಜಾಗೆಯನ್ನು ಸರ್ಕಾರದಿಂದ ವಾಪಸ್ ಪಡೆಯುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಸದನಕ್ಕೆ ತಿಳಿಸಿದರು.
ಯಶಸ್ವಿನಿ ಯೋಜನೆ, ನವಜಾತ ಶಿಶುವಿಗೆ ವರ್ಷದವರೆಗೆ ಚಿಕಿತ್ಸೆ;ಯಶಸ್ವಿನಿ ಯೋಜನೆಯ ಫಲಾನುಭವಿ ತಾಯಿ, ನವಜಾತ ಶಿಶುವಿಗೆ ತಿಂಗಳವರೆಗೆ ಮಾತ್ರ ಚಿಕಿತ್ಸೆಗೆ ಅವಕಾಶ ನೀಡಲಾಗಿತ್ತು. ಇನ್ನು ಮುಂದಿನ ದಿನಗಳಲ್ಲಿ ಯೋಜನೆಯಡಿ ಚಿಕಿತ್ಸೆ ನೀಡುವುದನ್ನು ವರ್ಷಕ್ಕೆ ವಿಸ್ತರಣೆ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಸ್ಪಷ್ಟಪಡಿಸಿದ್ದಾರೆ.