ಚಿಕ್ಕೋಡಿ :ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಮಳೆ ಮುಂದುವರೆದಿರುವ ಪರಿಣಾಮ ವೇದಗಂಗಾ ನದಿ ನೀರಿನ ಮಟ್ಟದಲ್ಲಿ ಮತ್ತೆ ಹೆಚ್ಚಳವಾಗಿದೆ. ಇದರಿಂದಾಗಿ ಹುನ್ನರಗಿ ಗ್ರಾಮಸ್ಥರಿಗೆ ಪ್ರವಾಹದ ಆತಂಕ ಎದುರಾಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮಕ್ಕೆ ಪ್ರವಾಹದ ನೀರು ಸನೀಹಕ್ಕೆ ಬಂದಿದೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕಗೊಳ್ಳುವಂತಾಗಿದೆ.
ಇನ್ನು 3 ರಿಂದ 4 ಅಡಿ ನೀರು ಹೆಚ್ಚಾದಲ್ಲಿ ಗ್ರಾಮಕ್ಕೆ ನೀರು ನುಗ್ಗುವ ಆತಂಕವಿದೆ. ಈಗಾಗಲೇ ಗ್ರಾಮದ ಲಕ್ಷ್ಮಿ ನಾರಾಯಣ ದೇವಸ್ಥಾನಕ್ಕೆ ನೀರು ನುಗ್ಗಿರುವ ಪರಿಣಾಮ ದೂರದಿಂದಲೇ ಗ್ರಾಮಸ್ಥರು ದೇವರ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ. ನದಿ ಪಕ್ಕದಲ್ಲಿ ಇರುವ ಮನೆಗಳನ್ನು ಈಗಾಗಲೇ ಜಿಲ್ಲಾಡಳಿತ ಗಂಜಿ ಕೇಂದ್ರಕ್ಕೆ ಕಳುಹಿಸಿದೆ. ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವಗಿತ್ತೆ ಹಾಗೂ ಪೊಲೀಸರು ಗ್ರಾಮಕ್ಕೆ ತೆರಳಿ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳ ಅಥವಾ ಕಾಳಜಿ ಕೇಂದ್ರಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ.
ನೀರಿನ ಮಟ್ಟ ಏರಿಕೆ ಸ್ಥಳಕ್ಕೆ ಆಗಮಿಸಿದ ಎನ್‌ಡಿಆರ್‌ಎಫ್ ತಂಡ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಸದಲಗಾ ಪಟ್ಟಣದ ಹೊರವಲಯದಲ್ಲಿ ದೂಧ್‌ಗಂಗಾ ನದಿಯಲ್ಲಿ ಒಳಹರಿವು ಹೆಚ್ಚಳವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಆಗಮಿಸಿ ಅಲ್ಲಿರುವ ಪರಿಸ್ಥಿತಿ ಅವಲೋಕಿಸಿದೆ. ನದಿಯಲ್ಲಿ ಬೋಟ್ ಮುಖಾಂತರ ತೆರಳಿ ವೀಕ್ಷಣೆ ಕೂಡಾ ಮಾಡಲಾಗಿದೆ. ದೂಧ್‌ಗಂಗಾ ನದಿಗೆ ಒಟ್ಟು 29,216 ಕ್ಯೂಸೆಕ್ ಒಳಹರಿವು ಹಿನ್ನೆಲೆ ನದಿ ತೀರಕ್ಕೆ ಯಾರೂ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಹಿರಣ್ಯಕೇಶಿ ನದಿ: ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿ ಒಳ ಹರಿವಿನಲ್ಲಿ ಏರಿಕೆಯಿಂದ ಮದಮಕ್ಕನಾಳ - ಯರನಾಳ ಸಂಪರ್ಕ ಕಡಿತಗೊಂಡಿದೆ. ಜಲಾವೃತವಾಗಿರುವ ಸೇತುವೆ ಮೇಲೆ ಬೈಕ್ ಸವಾರರು ಜೀವ ಭಯವಿಲ್ಲದೇ ಸಂಚಾರ ಮಾಡಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹುಕ್ಕೇರಿ ಪೊಲೀಸ್ ಬ್ಯಾರಿಕೇಡ್ ಅಳವಡಿಸದೇ ಇರುವುದರಿಂದ ಇನ್ನೂ ಕೆಲವರು ಸಂಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.