ಬೆಳಗಾವಿ: ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸುವಲ್ಲಿ ವಿಫಲ ಹಾಗೂ ಸುವರ್ಣಸೌಧದಲ್ಲಿ ಅಧಿವೇಶನ ನಡೆಸದ ಸರ್ಕಾರದ ಕ್ರಮ ಖಂಡಿಸಿ ಸುವರ್ಣಸೌಧಕ್ಕೆ ಕುರಿ ನುಗ್ಗಿಸಲು ಯತ್ನಿಸಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ವಾಟಾಳ್ ನಾಗರಾಜ್, ಕನ್ನಡ ಪರ ಹೋರಾಟಗಾರ ಕುರಿಗಳ ಸಮೇತ ಸುವರ್ಣಸೌಧಕ್ಕೆ ಆಗಮಿಸಿದ್ದ ನಾಗರಾಜ್ ಅವರನ್ನು ಹಿರೇಬಾಗೇವಾಡಿಯ ಪೊಲೀಸರು ವಶಕ್ಕೆ ಪಡೆದರು. ಹೀಗಾಗಿ ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಖಂಡಿಸಿ ವಾಟಾಳ್ ಹಿರೇಬಾಗೇವಾಡಿ ಠಾಣೆಯ ಎದುರೇ ಪ್ರತಿಭಟನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರದ ಸಚಿವರು, ಶಾಸಕರು ಕುರಿಗಳು ಇದ್ದಂತೆ. ಇವರಿಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ತಾಕತ್ತು ಇಲ್ಲ. ಉತ್ತರ ಕರ್ನಾಟಕದ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕರುಣೆ ಇಲ್ಲ. ಬಿಜೆಪಿ ಶಾಸಕರೇ ನೀವು ಶಾಸಕರ ಭವನದಲ್ಲಿ ಕುಳಿತುಕೊಳ್ಳಿ. ಸುವರ್ಣಸೌಧದಲ್ಲಿ ನಮಗೆ ಜನಜಾನುವಾರು, ಕುರಿ ಕಟ್ಟಲಿಕ್ಕೆ ಅನುವು ಮಾಡಿಕೊಡಿ. ಕುರಿಗಳ ಜೊತೆಗೆ ನನ್ನನ್ನು ಪೊಲೀಸರು ವಶಕ್ಕೆ ತೆಗೆದುಕ್ಕೊಂಡಿದ್ದಾರೆ. ಸಿಎಂ ಯಡಿಯೂರಪ್ಪನವರಿಗೆ ಉತ್ತಮ ಆಡಳಿತ ಕೊಡಲು ಆಗದಿದ್ದರೆ ರಾಜೀನಾಮೆ ನೀಡಿ ಹೋಗಲಿ ಎಂದು ಆಗ್ರಹಿಸಿದರು.
ವಿದಾನಸೌಧದಲ್ಲಿ ನಡೆಯುತ್ತಿರುವ ಖಾಸಗಿ ಮಾಧ್ಯಮಗಳ ಕ್ಯಾಮರಾ ನಿರ್ಬಂಧದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸ್ಪೀಕರ್ ಅವಿವೇಕ ನಿರ್ಧಾರ ತೆಗೆದುಕೊಂಡಿದ್ದಾರೆ. ನಾಲ್ಕನೇ ಅಂಗವನ್ನು ಹತ್ತಿಕ್ಕಲು ಹೊಗುತ್ತಿದ್ದಾರೆ. ಮಾಧ್ಯಮಗಳ ನಿರ್ಬಂಧದಿಂದ ವಿಧಾನಸೌಧದೊಳಗೆ ಬಟ್ಟೆ ಬಿಚ್ಚಿಕೊಂಡು ಕುಣಿದರೂ ಜನರಿಗೆ ತಿಳಿಯುವುದಿಲ್ಲ ಎಂದರು. ಸ್ಪೀಕರ್ ಸಿಎಂ ಏಜಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಸ್ಪಿಕರ್ ರಾಜೀನಾಮೆ ಕೊಡಬೇಕು. ಇಂತಹ ಸ್ಪೀಕರ್ ನಮಗೆ ಬೇಡ. ಸ್ಪೀಕರ್ ನಾಳೆ ಬೆಳಗ್ಗೆಯೊಳಗೆ ಮಾಧ್ಯಮಗಳ ಮೇಲೆ ಹೇರಿದ ನಿರ್ಬಂಧವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಕರ್ನಾಟಕ ಬಂದ್ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.