ಬೆಳಗಾವಿ:ಮುಂಬರುವ 15 ದಿನಗಳಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಿ ಕರ್ನಾಟಕ ಏಕೀಕರಣ ಸಮಿತಿ ರಚನೆ ಮಾಡಬೇಕು. ಇಲ್ಲವಾದರೆ ಕರ್ನಾಟಕ ಬಂದ್ಗೆ ಕರೆ ನೀಡುವ ಬಗ್ಗೆ ಯೋಚನೆ ಮಾಡುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ಚೆನ್ನಮ್ಮ ವೃತ್ತದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವುಗೊಳಿಸಿದರೆ ರಕ್ತಪಾತವಾಗುತ್ತದೆ. ಮುಂದಿನ ದಿನ ಬೆಳಗಾವಿ ಉದ್ದಕ್ಕೂ ಕನ್ನಡ ಬಾವುಟ ಹಾರಿಸುತ್ತೇವೆ. ಬೆಳಗಾವಿಯಲ್ಲಿ ಯಾವುದೇ ಕಾರಣಕ್ಕೂ ಎಂಇಎಸ್ ಇರಬಾರದು ಎಂದು ಅವರು ಆಕ್ರೋಶ ಹೊರ ಹಾಕಿದರು. ಮರಾಠಿ ಬೇಕಾ, ಮಹಾರಾಷ್ಟ್ರ ಬೇಕಾ ಎಂದು ಅವರನ್ನು ಕೇಳಿ, ಎಂಇಎಸ್ ಕಾರ್ಯಕರ್ತರನ್ನ ಕರೆಯಿಸಿ ಪೋಲೀಸರು ಸಭೆ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದ ಅವರು,ಎಂಇಎಸ್ ನಿಷೇಧಿಸಿ ಮುಖಂಡರಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಬೇಕು ಎಂದರು.
ಸಿಎಂ ಯಡಿಯೂರಪ್ಪ ಅವರಿಗೆ ಗಡಿ ಹಿತ ಕಾಯುವ ಶಕ್ತಿ ಇಲ್ಲ. ರಾಜ್ಯ ನಾಶ ಮಾಡುತ್ತಿರೋ ಅನಿಷ್ಠ ಸಿಎಂ.ರಾಜ್ಯಕ್ಕೆ ವರವಾಗುವ ಬದಲು ಶಾಪವಾಗುತ್ತಿದ್ದಾರೆ. ಮೈಸೂರಲ್ಲಿ ಇಂದು ಅಕ್ಕಮಹಾದೇವಿ ಪ್ರತಿಮೆ ಉದ್ಘಾಟನೆ ಮಾಡಲು ಹೋಗಿದ್ದಾರೆ. ಆದರೆ, ಅವರಿಗೆ ಆ ಯೋಗ್ಯತೆ ಇಲ್ಲ. ಬಿಎಸ್ವೈ ಅವರಷ್ಟು ಭ್ರಷ್ಟ ಸಿಎಂ ಮತ್ತೊಬ್ಬ ಇಲ್ಲ. ಕೂಡಲೇ ಅವರು ರಾಜೀನಾಮೆ ನೀಡಿ ಗಂಟು ಮೂಟೆ ಕಟ್ಟಿಕೊಂಡು ಹೋಗಬೇಕು. ಗಡಿಗೆ ಉದ್ದವ್ ಠಾಕ್ರೆ ಬಂದರೂ ಜೈಲಿಗೆ ಹಾಕಬೇಕು ಎಂದು ಕಿಡಿಕಾರಿದರು.
ಬೆಳಗಾವಿಯನ್ನು ಕರ್ನಾಟಕ ಸರ್ಕಾರ ಕೈಬಿಟ್ಟಿದೆ. ಬೆಳಗಾವಿ, ಕಾರವಾರ ಕರ್ನಾಟಕದ ಅವಿಭಾಜ್ಯ ಅಂಗ. ಬೇರೆ ರಾಜ್ಯದಿಂದ ಶಿವಸೇನೆ ನುಗ್ಗಿ ಕರ್ನಾಟಕಕ್ಕೆ ಬರುವವರೆಗೂ ಶಿವಸೇನೆ ಬಿಡಬಾರದಿತ್ತು. ಶಿವಸೇನೆಗೆ ಜೈಲಿನಲ್ಲಿ ಇಡಬೇಕಿತ್ತು. ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಭಾವುಟ ಹಾಕುವುದಕ್ಕೆ ಅಡ್ಡಿಪಡಿಸಿದ್ದು ಅತ್ಯಂತ ಅಗೌರ ಎಂದರು.
ಇನ್ನೂ ಹದಿನೈದು ದಿನಗಳಲ್ಲಿ ಎಂಇಎಸ್ ರಾಜ್ಯ ಬಿಡಬೇಕು. ಇಲ್ಲವಾದ್ರೇ ಬೆಳಗಾವಿಗೆ ನಾವು ನುಗ್ಗುತ್ತೇವೆ. ಶಿವಸೇನೆ ಪುಂಡರು ರಾಜ್ಯಕ್ಕೆ ನುಗ್ಗಿ ಗುಂಡಾವರ್ತನೆ ಮಾಡಿದ್ದಾರೆ. ಉದ್ಧವ್ ಠಾಕ್ರೆ ಬಂದ್ರೂ ಜೈಲಿಗೆ ಹಾಕಬೇಕು. ಯಾವುದೇ ಶಿವಸೇನೆಯವರು ಗಡಿ ದಾಟಿದ್ರೂ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಇಲ್ಲಿನ ರಾಜಕಾರಣಿಗಳು ನರ ಸತ್ತ ರಾಜಕಾರಣಿಗಳಾಗಿದ್ದು, ಎಂಇಎಸ್ ಏಜೆಂಟ್ಗಳಾಗಿದ್ದಾರೆ. ಎಂಇಎಸ್ ನಿಷೇಧ ಮಾಡ್ಲಿ ಇಲ್ಲಾ ನಮ್ಮನ್ನ ವರ್ಷಗಟ್ಟಲೇ ಜೈಲಿಗೆ ಹಾಕಲಿ ಎಂದರು.
ಜಿಲ್ಲೆಯ ರಾಜಕಾರಣಿಗಳು ಅವಿವೇಕಿಗಳು, ಅವರು ಸೋತ್ರು ಆಮೇಲೆ ಎಂಎಲ್ಸಿ ನಂತರ ಡಿಸಿಎಂ ಮಾಡಿದ್ರೂ. ಬೆಳಗಾವಿಗೆ ದ್ರೋಹ ಮಾಡುತ್ತಿದ್ದಾರೆ. ಮಾನ ಮರ್ಯಾದೆ ಇದ್ರೇ ರಾಜೀನಾಮೆ ಕೊಡಬೇಕು. ಪಾಲಿಕೆ ಮುಂದಿರುವ ಕನ್ನಡ ಧ್ವಜ ತೆಗೆದ್ರೇ ರಕ್ತಪಾತವಾಗುತ್ತೆ. ಹದಿನೈದು ದಿನ ಗಡುವು ಕೊಟ್ಟಿದ್ದೇವೆ ಅದ್ರಲ್ಲಿ ತೀರ್ಮಾನ ಆಗದಿದ್ದರೆ ಕರ್ನಾಟಕ ಬಂದ್ ಗೆ ತೀರ್ಮಾನ ಮಾಡುತ್ತೇವೆ ಎಂದರು.
ಪೊಲೀಸರ ವಶಕ್ಕೆ ಕನ್ನಡಪರ ಹೋರಾಟಗಾರರ ವಾಟಾಳ್ ನಾಗರಾಜ್, ಸಾರಾ ಗೋವಿಂದ್:ಇದೇ ವೇಳೆ, ಶಿವಸೇನೆ ಪುಂಡಾಟಿಕೆ ಖಂಡಿಸಿ ವಾಟಾಳ್ ನಾಗರಾಜ್, ಸಾರಾ ಗೋವಿಂದ್ ನೇತೃತ್ವದಲ್ಲಿ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಧರಣಿ ನಡೆಸುತ್ತಿದ್ದ ಐವತ್ತಕ್ಕೂ ಅಧಿಕ ಕನ್ನಡಪರ ಹೋರಾಟಗಾರರನ್ನ ಪೊಲೀಸರು ವಶಕ್ಕೆ ಪಡೆದರು.
ಇದಕ್ಕೂ ಮುನ್ನ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ ವಾಟಾಳ್ ನಾಗರಾಜ್, ಸಾ.ರಾ ಗೋವಿಂದ್. ಬೆಳಗಾವಿಯ ಚನ್ನಮ್ಮ ವೃತ್ತಕ್ಕೆ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ, ಶಿವರಾಮೇಗೌಡ ಬಣ ಮತ್ತು ಸ್ಥಳೀಯ ಕನ್ನಡಪರ ಹೋರಾಟಗಾರರು ಭಾಗಿಯಾಗಿದ್ದರು. ಈ ವೇಳೆ, ಕನ್ನಡಪರ ಹೋರಾಟಗಾರರು ಚನ್ನಮ್ಮ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಬ್ಯಾರಿಕೆಡ್ ಹಾಕಿ ಪೊಲೀಸರು ತಡೆದರು. ಈ ವೇಳೆ, ಎಂಇಎಸ್ ಪುಂಡರ ವಿರುದ್ಧ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವ್ಯಕ್ತಪಡಿಸಿದರು. ಬಳಿಕ ಶಿನ್ನೋಳ್ಳಿ ಚೆಕ್ ಪೋಸ್ಟ್ ಗೆ ತೆರಳಿ ಪ್ರತಿಭಟನೆ ನಡೆಸಲು ಹೊರಟ್ಟಿದ್ದ ಸಂದರ್ಭದಲ್ಲಿ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.