ಬೆಳಗಾವಿ: ಸರ್ಕಾರದ ಆದೇಶದಂತೆ ವಿವಿಧ ಇಲಾಖೆ ಹಾಗೂ ನಿಗಮಗಳ ಕಚೇರಿಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಖಾಸಗಿ ಕಟ್ಟಡಗಳಲ್ಲಿ ಬಾಡಿಗೆ ಇರುವ ಸರ್ಕಾರದ ವಿವಿಧ ಕಚೇರಿಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸುವ ಕುರಿತು ಸರ್ಕಾರ ಆದೇಶ ನೀಡಿರುವ ಹಿನ್ನೆಲೆ ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸಂಬಂಧಿಸಿದ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆದಿದ್ದು, ಡಿಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುವರ್ಣ ಸೌಧ ಉತ್ತರ ಕರ್ನಾಟಕದ ಹೆಮ್ಮೆಯ ಪ್ರತೀಕವಾಗಿದ್ದು, ಅಧಿವೇಶನ ಹೊರತುಪಡಿಸಿ ಸುವರ್ಣ ಸೌಧ ಬಳಕೆ ಆಗುತ್ತಿರಲಿಲ್ಲ. ಆದ್ರೆ ಸರ್ಕಾರ ಬಾಡಿಗೆ ಕಟ್ಟಡದಲ್ಲಿ ಇರುವ 24 ಕಚೇರಿಗಳನ್ನು ಸ್ಥಳಾಂತರ ಮಾಡಲು ಆದೇಶ ನೀಡಿದ್ದು, ಕಚೇರಿಗಳಿಗೆ ಬೇಕಾಗುವ ಎಲ್ಲಾ ವ್ಯವಸ್ಥೆಯನ್ನು ಜಿಲ್ಲಾಡಳಿತದ ವತಿಯಿಂದ ಮಾಡಿಕೊಡಲಾಗುವುದು ಎಂದು ಹೇಳಿದರು.
ಸಾರಿಗೆ ಸಂಸ್ಥೆ ಕಚೇರಿಗಳ ಸಮಯಕ್ಕೆ ಅನುಗುಣವಾಗಿ ಬಸ್ಗಳ ವ್ಯವಸ್ಥೆ ಮಾಡಬೇಕು. ಕಚೇರಿಗಳ ಸ್ಥಳಾಂತರ ಆದ ಬಳಿಕ ಎಲ್ಲರೂ ವಾತಾವರಣಕ್ಕೆ ಹೊಂದಿಕೊಂಡು ಕೆಲಸ ನಿರ್ವಹಿಸಬೇಕು. ಕಚೇರಿಗಳ ಸ್ಥಳಾಂತರವಾದ ಪ್ರಾರಂಭದಲ್ಲಿ ಕಚೇರಿಗಳಿಗೆ ಬೇಕಾಗುವ ಕುರ್ಚಿ, ಟೇಬಲ್‍ಗಳ ಖರೀದಿಗೆ ಅವಕಾಶ ಇಲ್ಲ. ಹಾಗಾಗಿ ಕಚೇರಿಗಳಲ್ಲಿ ಈಗಾಗಲೇ ಇರುವ ವಸ್ತುಗಳನ್ನು ಬಳಕೆ ಮಾಡಿಕೊಳ್ಳಬೇಕು.
ಲೋಕೋಪಯೋಗಿ ಇಲಾಖೆಯವರು ಸುಸಜ್ಜಿತ ಕ್ಯಾಂಟೀನ್ ವ್ಯವಸ್ಥೆ ಮಾಡಿಕೊಡಬೇಕು. ಸಿಬ್ಬಂದಿ ವರ್ಗದ ಆರೋಗ್ಯದ ದೃಷ್ಟಿಯಿಂದ ಹೆಲ್ತ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗುತ್ತದೆ. ಈಗಾಗಲೇ ಅಂಚೆ ಕಚೇರಿ ವ್ಯವಸ್ಥೆ ಸುವರ್ಣ ಸೌದದಲ್ಲಿದ್ದು, ಬ್ಯಾಂಕ್ ಹಾಗೂ ಎಟಿಎಂ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.